ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಸರಿಗಟ್ಟಿದ ಗುರ್ಬಾಝ್
Rahmanullah Gurbaz: ಅಫ್ಘಾನಿಸ್ತಾನ್ ಪರ ಈವರೆಗೆ 43 ಏಕದಿನ ಪಂದ್ಯಗಳನ್ನಾಡಿರುವ ರಹಮಾನುಲ್ಲಾ ಗುರ್ಬಾಝ್ ಒಟ್ಟು 7 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಅಫ್ಘಾನ್ ಪರ ಅತ್ಯಧಿಕ ಏಕದಿನ ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಇದೀಗ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ.
1 / 5
ಶಾರ್ಜಾದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಅಫ್ಘಾನಿಸ್ತಾನ್ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಝ್ ವಿಶೇಷ ದಾಖಲೆ ಬರೆದಿದ್ದಾರೆ. ಅದು ಸಹ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದೇ ವಿಶೇಷ.
2 / 5
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಗುರ್ಬಾಝ್ 110 ಎಸೆತಗಳಲ್ಲಿ 3 ಸಿಕ್ಸ್, 10 ಫೋರ್ ಗಳೊಂದಿಗೆ 105 ರನ್ ಚಚ್ಚಿದ್ದರು. ಈ ಸೆಂಚುರಿಯೊಂದಿಗೆ ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.
3 / 5
ಇದಕ್ಕೂ ಮುನ್ನ 2ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಮಾತ್ರ ಕಾಣಿಸಿಕೊಂಡಿದ್ದರು. 23 ವರ್ಷದೊಳಗೆ 66 ಏಕದಿನ ಇನಿಂಗ್ಸ್ ಆಡಿದ್ದ ಕೊಹ್ಲಿ ಒಟ್ಟು 7 ಸೆಂಚುರಿ ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು.
4 / 5
ಇದೀಗ 23ನೇ ವಯಸ್ಸಿನಲ್ಲಿ 7ನೇ ಶತಕ ಪೂರೈಸುವ ಮೂಲಕ ರಹಮಾನುಲ್ಲಾ ಗುರ್ಬಾಝ್ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ. ಇನ್ನು ಈ ದಾಖಲೆ ಸರಿಗಟ್ಟಲು ಗುರ್ಬಾಝ್ ತೆಗೆದುಕೊಂಡಿರುವುದು ಕೇವಲ 42 ಇನಿಂಗ್ಸ್ ಮಾತ್ರ ಎಂಬುದು ವಿಶೇಷ.
5 / 5
ಇನ್ನು ಈ ವಿಶ್ವ ದಾಖಲೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಸೌತ್ ಆಫ್ರಿಕಾದ ಕ್ವಿಂಟನ್ ಡಿಕಾಕ್. 23 ವರ್ಷದೊಳಗೆ 113 ಏಕದಿನ ಇನಿಂಗ್ಸ್ ಆಡಿದ್ದ ಸಚಿನ್ 8 ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು. 52 ಇನಿಂಗ್ಸ್ಗಳಲ್ಲಿ 8 ಏಕದಿನ ಶತಕ ಬಾರಿಸುವ ಮೂಲಕ ಕ್ವಿಂಟನ್ ಡಿಕಾಕ್ ಈ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಜೊತೆ 2ನೇ ಸ್ಥಾನ ಅಲಂಕರಿಸುವಲ್ಲಿ ರಹಮಾನುಲ್ಲಾ ಗುರ್ಬಾಝ್ ಕೂಡ ಯಶಸ್ವಿಯಾಗಿದ್ದಾರೆ.