
ತಮ್ಮ ಕೋಚಿಂಗ್‌ನಲ್ಲಿ ಟೀಂ ಇಂಡಿಯಾವನ್ನು ಟಿ20 ವಿಶ್ವ ಚಾಂಪಿಯನ್ ಮಾಡಿದ್ದ ಕನ್ನಡಿಗ ರಾಹುಲ್ ದ್ರಾವಿಡ್, ಇದೀಗ ಕ್ರಿಕೆಟ್ನಿಂದ ಕೊಂಚ ವಿರಾಮ ತೆಗೆದುಕೊಂಡಿದ್ದಾರೆ. ವಾಸ್ತವವಾಗಿ ಟಿ20 ವಿಶ್ವಕಪ್ ಮುಗಿಯುವುದರೊಂದಿಗೆ ಟೀಂ ಇಂಡಿಯಾದಲ್ಲಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯೂ ಮುಕ್ತಾಯವಾಗಿತ್ತು. ಆ ನಂತರವೂ ಹುದ್ದೆಯಲ್ಲಿ ಮುಂದುವರೆಯಲು ಬಿಸಿಸಿಐ ಕೇಳಿಕೊಂಡಿತ್ತಾದರೂ ದ್ರಾವಿಡ್ ಇದಕ್ಕೆ ಸಮ್ಮತಿ ನೀಡಿರಲಿಲ್ಲ.

ಇದಕ್ಕೆ ಕಾರಣವನ್ನೂ ನೀಡಿದ್ದ ದ್ರಾವಿಡ್, ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವ ಸಲುವಾಗಿ ಕ್ರಿಕೆಟ್ನಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಮುಂಬೈನಲ್ಲಿ ನಡೆದ ಸಿಇಎಟಿ ಕ್ರಿಕೆಟ್ ಪ್ರಶಸ್ತಿ ಸಮಾರಂಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಬಳಿಕ ಪತ್ರಕರ್ತರೂ ಕೇಳಿದ ಹಲವು ಪ್ರಶ್ನೆಗಳಿಗೆ ದ್ರಾವಿಡ್ ತಮ್ಮದೇ ದಾಟಿಯಲ್ಲಿ ಉತ್ತರಿಸಿದ್ದಾರೆ. ಅದರಲ್ಲೂ ತಮ್ಮ ಬಯೋಪಿಕ್ ಬಗ್ಗೆ ದ್ರಾವಿಡ್ ನೀಡಿದ ಉತ್ತರ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

ವಾಸ್ತವವಾಗಿ, ಈ ಪ್ರಶಸ್ತಿ ಸಮಾರಂಭದಲ್ಲಿ ಪಾಪರಾಜಿಗಳು ದ್ರಾವಿಡ್ ಅವರ ಬಳಿ ಹಲವು ಪ್ರಶ್ನೆಗಳನ್ನು ಕೇಳಿದರು. ಈ ವೇಳೆ, ನಿಮ್ಮ ಜೀವನಚರಿತ್ರೆ ತಯಾರಾದರೆ, ನಿಮ್ಮ ಪಾತ್ರದಲ್ಲಿ ಯಾವ ನಟನನ್ನು ನೋಡಲು ಬಯಸುತ್ತೀರಿ? ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ತಮಾಷೆಯಾಗಿ ಉತ್ತರಿಸಿದ ದ್ರಾವಿಡ್, ‘ನನಗೆ ಉತ್ತಮ ಸಂಭಾವನೆ ನೀಡಿದರೆ, ಈ ಪಾತ್ರವನ್ನು ನಾನೇ ಮಾಡಲು ಬಯಸುತ್ತೇನೆ ಎಂದು ಹೇಳಿ ಜೋರಾಗಿ ನಕ್ಕರು. ದ್ರಾವಿಡ್ ಅವರ ಈ ಉತ್ತರವನ್ನು ಕೇಳಿ ಅಲ್ಲಿದ್ದವರಿಗೂ ನಗು ತಡೆಯಲಾಗಲಿಲ್ಲ.

ಇದಲ್ಲದೆ ಈ ವೇಳೆ ದ್ರಾವಿಡ್ ಅವರಿಗೆ 2023ರ ಏಕದಿನ ವಿಶ್ವಕಪ್ ಮತ್ತು 2024ರ ಟಿ20 ವಿಶ್ವಕಪ್ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ದ್ರಾವಿಡ್, ಕೆಲವೊಮ್ಮೆ ಸ್ವಲ್ಪ ಅದೃಷ್ಟ ಕೂಡ ದೊಡ್ಡ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಇದಕ್ಕೆ ನಾನು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲು ಮತ್ತು ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವನ್ನು ಉದಾಹರಣೆಯಾಗಿ ನೀಡುತ್ತೇನೆ ಎಂದರು.

ಇನ್ನು ಏಕದಿನ ವಿಶ್ವಕಪ್ ಸೋಲು ಹಾಗೂ ಟಿ20 ವಿಶ್ವಕಪ್ ಗೆಲುವು... ಈ ಎರಡು ಟೂರ್ನಮೆಂಟ್‌ಗಳ ನಡುವೆ ಟೀಂ ಇಂಡಿಯಾದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ದ್ರಾವಿಡ್ ಅವರನ್ನು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್, ‘ನಿಜ ಹೇಳಬೇಕೆಂದರೆ, ನಾನು ವಿಭಿನ್ನವಾಗಿ ಏನನ್ನೂ ಮಾಡಲು ಬಯಸಲಿಲ್ಲ. ಏಕದಿನ ವಿಶ್ವಕಪ್‌ನಲ್ಲಿ ನಾವು ಉತ್ತಮ ಆರಂಭ ಪಡೆದುಕೊಂಡೆವು ಎಂದು ನಾನು ಭಾವಿಸುತ್ತೇನೆ. ತಂಡದಲ್ಲಿದ್ದವರೆಲ್ಲೂ ಉತ್ತಮ ಪ್ರದರ್ಶನ ನೀಡಿದರು.

ನಾವು ಸತತ 10 ಪಂದ್ಯಗಳನ್ನು ಗೆಲ್ಲಲು ಏನು ಮಾಡಿದೆವು, ಅದು ಟೂರ್ನಿಯುದ್ದಕ್ಕೂ ನಮ್ಮ ಮನಸ್ಥಿತಿಯಾಗಿತ್ತು. ನಮಗೆ ಸರಿ ಎನಿಸಿದ್ದನ್ನು ಮಾಡಿದ್ದೇವೆ. ನಾನು ಒಬ್ಬ ಆಟಗಾರನಾಗಿ ಭಾರತದಲ್ಲಿ ನಡೆದ ವಿಶ್ವಕಪ್‌ನ ಭಾಗವಾಗಿರಲಿಲ್ಲ, ಆದರೆ ಒಬ್ಬ ತರಬೇತುದಾರನಾಗಿ ನಗರದಿಂದ ನಗರಕ್ಕೆ ಹೋಗಿ ಈ ದೇಶದ ಜನರೊಟ್ಟಿಗೆ ಬೇರತು ವಿಶ್ವಕಪ್ ಗೆಲುವಿನ ಖುಷಿಯನ್ನು ಅನುಭವಿಸಿದ್ದ ಅದ್ಭುತವಾಗಿತ್ತು. ನಾವು ಫೈನಲ್‌ನಲ್ಲಿ ಸೋತಿದ್ದು ನಂಬಲಸಾಧ್ಯವಾಗಿತ್ತು. ಆದರೆ ಆ ದಿನ ಆಸ್ಟ್ರೇಲಿಯಾ ನಮಗಿಂತ ಉತ್ತಮವಾಗಿ ಕ್ರಿಕೆಟ್ ಆಡಿತು. ಹೀಗಾಗಿ ಗೆದ್ದರು ಎಂದು ದ್ರಾವಿಡ್ ಹೇಳಿದ್ದಾರೆ.