ಕೆಲವೇ ವರ್ಷಗಳ ಹಿಂದೆ ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಖಾಯಂ ಸ್ಪಿನ್ನರ್ ಆಗಿ ಕಾಣಿಸಿಕೊಳ್ಳುತ್ತಿದ್ದ ಗೂಗ್ಲಿ ಮಾಸ್ಟರ್ ಯುಜ್ವೇಂದ್ರ ಚಹಾಲ್ ಇದೀಗ ತಂಡದಿಂದ ಮಾಯವಾಗಿದ್ದಾರೆ. ಕಳೆದ 7 ತಿಂಗಳುಗಳಿಂದ ಚಾಹಲ್ ಟೀಂ ಇಂಡಿಯಾ ಪರ ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕಿಲ್ಲ.
ಟಿ20 ವಿಶ್ವಕಪ್ ತಂಡದಲ್ಲಿ ಚಾಹಲ್ ಸ್ಥಾನ ಪಡೆದಿದ್ದರಾದರೂ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಟಿ20 ವಿಶ್ವಕಪ್ ಬಳಿಕ ನಡೆದ ಶ್ರೀಲಂಕಾ ಪ್ರವಾಸದಕ್ಕೂ ಚಾಹಲ್ ತಂಡದಲ್ಲಿ ಆಯ್ಕೆಯಾಗಿರಲಿಲ್ಲ. ಹೀಗಾಗಿ ಟೀಂ ಇಂಡಿಯಾದಲ್ಲಿ ಚಾಹಲ್ ಅವರದ್ದು ಮುಗಿದ ಅಧ್ಯಾಯ ಎಂದು ಹೇಳಲಾಗುತ್ತಿದೆ.
ಇದಕ್ಕೆ ಪೂರಕವಾಗಿ ಇನ್ನೇನು ಆರಂಭವಾಗಲಿರುವ ದೇಶೀ ಟೂರ್ನಿ ದುಲೀಪ್ ಟ್ರೋಫಿಗೂ ಚಾಹಲ್ರನ್ನು ಆಯ್ಕೆ ಮಾಡಲಾಗಿಲ್ಲ. ಹೀಗಾಗಿ ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಲುವಾಗಿ ಚಾಹಲ್ ಇದೀಗ ವಿದೇಶಿ ಕ್ರಿಕೆಟ್ನತ್ತ ಮುಖಮಾಡಿದ್ದು ಇಂಗ್ಲೆಂಡ್ನಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
ಯುಜ್ವೇಂದ್ರ ಚಾಹಲ್ ಇಂಗ್ಲೆಂಡ್‌ನ ನಾರ್ಥಾಂಪ್ಟನ್‌ಶೈರ್ ಕ್ರಿಕೆಟ್ ಕ್ಲಬ್ ಪರ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿರುವುದಾಗಿ ತಮ್ಮ ಅಧಿಕೃತ 'ಎಕ್ಸ್' ಹ್ಯಾಂಡಲ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಚಹಾಲ್ ತಂಡದ ಶಿಬಿರಕ್ಕೆ ಸೇರುವ ಮೊದಲು ನಾರ್ಥಾಂಪ್ಟನ್‌ಶೈರ್‌ನ ಕ್ಯಾಪ್‌ನೊಂದಿಗೆ ಪೋಸ್ ನೀಡಿದ್ದಾರೆ. ಈ ಫೋಟೋ ಜೊತೆಗೆ, ಚಾಹಲ್ #554 ಎಂಬ ಶೀರ್ಷಿಕೆ ಬರೆದು, ನಾರ್ಥಾಂಪ್ಟನ್‌ಶೈರ್ ಅನ್ನು ಸಹ ಟ್ಯಾಗ್ ಮಾಡಿದ್ದಾರೆ.
ನಾರ್ಥಾಂಪ್ಟನ್‌ಶೈರ್ ಕ್ರಿಕೆಟ್ ಕ್ಲಬ್ ಪರ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿರುವ ಚಾಹಲ್ ಈಗ ಕೌಂಟಿ ಚಾಂಪಿಯನ್‌ಶಿಪ್‌ನ ಮುಂದಿನ ಕೆಲವು ಪಂದ್ಯಗಳಲ್ಲಿ ತಂಡದ ಪರ ಕೌಂಟಿ ಕ್ರಿಕೆಟ್ ಆಡಲಿದ್ದಾರೆ. ಇದಕ್ಕೂ ಮೊದಲು ಚಾಹಲ್ ಏಕದಿನ ಕಪ್‌ನಲ್ಲೂ ಇದೇ ತಂಡದ ಪರ ಆಡಿದ್ದು, ಅಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದರು.
2016 ರಲ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಯುಜ್ವೇಂದ್ರ ಚಹಾಲ್, ಟೀಮ್ ಇಂಡಿಯಾ ಪರ ಇದುವರೆಗೆ ಸೀಮಿತ ಓವರ್ಗಳಲ್ಲಿ ಅಂದರೆ ಏಕದಿನ ಮತ್ತು ಟಿ20 ಮಾದರಿಯಲ್ಲಿ ಮಾತ್ರ ಆಡಿದ್ದಾರೆ. ಚಾಹಲ್ಗೆ ಇದುವರೆಗೆ ಟೀಂ ಇಂಡಿಯಾ ಪರ ಟೆಸ್ಟ್‌ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.
ಚಹಾಲ್ ಇದುವರೆಗೆ ಟೀಂ ಇಂಡಿಯಾ ಪರ 72 ಏಕದಿನ ಹಾಗೂ 80 ಟಿ20 ಪಂದ್ಯಗಳನ್ನು ಆಡಿದ್ದು, ಏಕದಿನದಲ್ಲಿ 121 ಮತ್ತು ಟಿ20ಯಲ್ಲಿ 96 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ ಕಮಾಲ್ ಮಾಡಿರುವ ಚಾಹಲ್ ಇದುವರೆಗೆ 35 ಪಂದ್ಯಗಳಲ್ಲಿ 96 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇನ್ನು ಈ ವರ್ಷದ ಜನವರಿಯಲ್ಲಿ ಟೀಂ ಇಂಡಿಯಾ ಪರ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದ ಚಾಹಲ್, ನ್ಯೂಜಿಲೆಂಡ್ ವಿರುದ್ಧ ನಡೆದ ಈ ಪಂದ್ಯದಲ್ಲಿ 7.2 ಓವರ್ ಬೌಲ್ ಮಾಡಿ 43 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಇದಲ್ಲದೇ ಕಳೆದ ವರ್ಷ ಆಗಸ್ಟ್‌ನಲ್ಲಿ ಚಾಹಲ್ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು.
Published On - 5:09 pm, Fri, 23 August 24