
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಇಂದಿನಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಿದೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿನ ಸೋಲಿನ ನಂತರ, ವೈಎಸ್‌ಆರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯವನ್ನು ಸಮಬಲಗೊಳಿಸಲು ಭಾರತ ಯೋಜನೆ ರೂಪಿಸಿಕೊಂಡಿದೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಇಲ್ಲದ ಕಾರಣ ಹೊಸ ಆಟಗಾರರು ತಂಡ ಸೇರಿಕೊಂಡಿದ್ದಾರೆ. ಮುಖ್ಯವಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಜತ್ ಪಟಿದಾರ್ ಟೆಸ್ಟ್ ಪದಾರ್ಪಣೆ ಮಾಡಿದ್ದಾರೆ.

ಇದಕ್ಕೂ ಮುನ್ನ BCCI.TV ಜೊತೆ ಮಾತನಾಡಿದ ಪಟಿದಾರ್, “ನಾನು ಯಾವಾಗಲೂ ಕೊಹ್ಲಿ ಬ್ಯಾಟಿಂಗ್ ಅನ್ನು ನೆಟ್ಸ್‌ನ ಹಿಂಭಾಗದಿಂದ ಗಮನಿಸುತ್ತಿದ್ದೆ. ವಿಶೇಷವಾಗಿ ಅವರು ಬ್ಯಾಟಿಂಗ್ ಮಾಡುವಾಗ ಕಾಲ್ಚಳಕ ಮತ್ತು ದೇಹದ ಚಲನೆಯನ್ನು ಗಮನಿಸುತ್ತಿದ್ದೆ. ನನ್ನ ಬ್ಯಾಟಿಂಗ್‌ನಲ್ಲಿ ಈ ವಿಷಯಗಳನ್ನು ಸೇರಿಸಲು ಪ್ರಯತ್ನಿಸುತ್ತೇನೆ, ”ಎಂದು ಪಟಿದಾರ್ ಹೇಳಿದ್ದಾರೆ.

"ನಾನು ರೋಹಿತ್ ಭಾಯ್ ಜೊತೆ ಹೆಚ್ಚು ಮಾತನಾಡಿರಲಿಲ್ಲ. ಆದರೆ ಈ ಪ್ರವಾಸದಲ್ಲಿ ನಾನು ಅವರೊಂದಿಗೆ ಬ್ಯಾಟಿಂಗ್ ಕುರಿತು ಹೆಚ್ಚು ಕಲಿತುಕೊಂಡೆ. ಅವರು ನೆಟ್ಸ್‌ನಲ್ಲಿ ತಮ್ಮ ಅನುಭವಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ. ಇದೆಲ್ಲವೂ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ,'' ಎಂದು ಪಟಿದಾರ್ ಹೇಳಿದರು.

ನನ್ನ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ನಾನು ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟ್ ಬೀಸುತ್ತೇನೆ ಎಂದಿದ್ದಾರೆ. "ನಾನು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಹೊಂದಿದ್ದೇನೆ. ನಾನು ಆ ರೀತಿಯಲ್ಲಿ ನನ್ನನ್ನು ಸಿದ್ಧಪಡಿಸಿದ್ದೇನೆ, ಅದು ನನಗೆ ಅಭ್ಯಾಸವಾಗಿದೆ" ಎಂದು ರಜತ್ ಪಟಿದಾರ್ ಬಿಸಿಸಿಐ ಟಿವಿಯಲ್ಲಿ ಹೇಳಿದ್ದಾರೆ.

ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ರಜತ್ ಪಟಿದಾರ್, ಕೆಎಸ್ ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮುಖೇಶ್ ಕುಮಾರ್.