
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಹೊಂದಿರುವ ರಶೀದ್ ಖಾನ್ (Rashid Khan) ಇದೀಗ ಅಫ್ಘಾನಿಸ್ತಾನ್ ಪರ ಏಕದಿನ ಕ್ರಿಕೆಟ್ನಲ್ಲಿ ವಿಶೇಷ ಮೈಲುಗಲ್ಲು ದಾಟಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಅಫ್ಗಾನ್ ತಂಡದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಅಬುಧಾಬಿಯಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10 ಓವರ್ಗಳನ್ನು ಎಸೆದ ರಶೀದ್ ಖಾನ್ ಕೇವಲ 38 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಈ ಮೂರು ವಿಕೆಟ್ಗಳೊಂದಿಗೆ ರಶೀದ್ ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ಗಳನ್ನು ಪೂರೈಸಿದ್ದಾರೆ.

ಈ ಮೂಲಕ ಅಫ್ಘಾನಿಸ್ತಾನ್ ಪರ ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ಗಳನ್ನು ಕಬಳಿಸಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಒನ್ ಡೇ ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ನಲ್ಲಿ 200 ವಿಕೆಟ್ ಉರುಳಿಸಿದ ವಿಶ್ವದ 2ನೇ ಸ್ಪಿನ್ನರ್ ಎಂಬ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಅಫ್ಘಾನಿಸ್ತಾನದ ಮಾಜಿ ಸ್ಪಿನ್ನರ್ ಸಖ್ಲೈನ್ ಮುಷ್ತಾಕ್. ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ ಕಬಳಿಸಿದ ಸಖ್ಲೈನ್ ತೆಗೆದುಕೊಂಡಿರುವುದು ಕೇವಲ 104 ಇನಿಂಗ್ಸ್ಗಳನ್ನು ಮಾತ್ರ. ಈ ಮೂಲಕ ಒನ್ಡೇ ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ನಲ್ಲಿ 200 ವಿಕೆಟ್ ಕಬಳಿಸಿದ ಸ್ಪಿನ್ನರ್ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.

ಇದೀಗ ಕೇವಲ 107 ಇನಿಂಗ್ಸ್ಗಳ ಮೂಲಕ ರಶೀದ್ ಖಾನ್ ಏಕದಿನ ಕ್ರಿಕೆಟ್ನಲ್ಲಿ 202 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಸಖ್ಲೈನ್ ನಂತರ 110 ಕ್ಕಿಂತ ಕಡಿಮೆ ಇನಿಂಗ್ಸ್ಗಳ ಮೂಲಕ ಒನ್ಡೇ ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ ವಿಶ್ವದ 2ನೇ ಸ್ಪಿನ್ನರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.