
ಟೀಂ ಇಂಡಿಯಾದ ಸ್ಟಾರ್ ಆಟಗಾರ ರಿಷಬ್ ಪಂತ್ ಸದ್ಯ ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ರಿಷಬ್ ಪಂತ್ ಭೀಕರ ಅಪಘಾತಕ್ಕೀಡಾಗಿದ್ದರು. ಈ ಅಪಘಾತದಲ್ಲಿ ಪಂತ್ ತೀವ್ರವಾಗಿ ಗಾಯಗೊಂಡಿದ್ದರು. ಅಪಘಾತದ ಬಳಿಕ ಪಂತ್ಗೆ ಮುಂಬೈನ ಕೋಕಿಲ್ ಬೆನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು.

ಇದೀಗ ಇಂಜುರಿಯಿಂದ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ರಿಷಬ್ ಪಂತ್, ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್ನಲ್ಲಿದ್ದಾರೆ. ವಿಶ್ವಕಪ್ ದೃಷ್ಟಿಯಿಂದ ತಂಡ ಸೇರಿಕೊಳ್ಳಲು ಶತಪ್ರಯತ್ನ ಮಾಡುತ್ತಿರುವ ಪಂತ್ ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಬಯೋ ಬದಲಿಸಿದ್ದಾರೆ.

ದಾಖಲೆಗಳ ಪ್ರಕಾರ ಪಂತ್ ಹುಟ್ಟಿದ್ದು, 1997ರ ಅಕ್ಟೋಬರ್ 4ರಂದು. ಆದರೆ ಈಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಯೋ ಬದಲಿಸಿರುವ ಪಂತ್, ನನ್ನ 2ನೇ ಹುಟ್ಟುಹಬ್ಬ 5 ಜನವರಿ 2023 ಅಂತ ಬರೆದುಕೊಂಡಿದ್ದಾರೆ.

ಯಾಕಂದ್ರೆ ಡಿಸೆಂಬರ್ 30 ರಂದು ಕಾರು ಅಪಘಾತಕ್ಕೀಡಾಗಿದ್ದ ಪಂತ್ರನ್ನು ಮುಂಬೈನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಅಪಘಾತ ಸಂಭವಿಸಿ ದಿನ ಕಳೆದಂತೆ ಪಂತ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿತ್ತು. ಹೀಗಾಗಿ ಕಾರು ಅಪಘಾತವಾದ ಬಳಿಕ ತಾನು ಸತ್ತು ಬದುಕಿದ್ದೇನೆ ಅಂತ ತಿಳಿಸಲು ಪಂತ್ ಹೀಗೆ ಬರೆದುಕೊಂಡಿರಬಹುದು ಎಂದು ಊಹಿಸಲಾಗಿದೆ.

ಇನ್ನು ರಿಷಬ್ ಪಂತ್ ಅವರ ಕ್ರಿಕೆಟ್ ಬದುಕನ್ನು ಮೆಲುಕು ಹಾಕುವುದಾದರೆ, 2022 ರಲ್ಲಿ ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದ್ದ ಪಂತ್, ಟೀಮ್ ಇಂಡಿಯಾ ಪರ 7 ಪಂದ್ಯಗಳನ್ನು ಆಡಿದ್ದು, 61.81 ಸರಾಸರಿಯಲ್ಲಿ 680 ರನ್ ಕಲೆಹಾಕಿದ್ದಾರೆ.