ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 31 ರನ್ ಬಾರಿಸಿದ ಕೂಡಲೇ, ಸ್ಮಿತ್ ಟೆಸ್ಟ್‌ನಲ್ಲಿ ಒಂಬತ್ತು ಸಾವಿರ ರನ್‌ಗಳನ್ನು ಪೂರೈಸಿದರು.
ತಮ್ಮ ವೃತ್ತಿ ಜೀವನದ 99 ನೇ ಟೆಸ್ಟ್ ಪಂದ್ಯದಲ್ಲಿ ಒಂಬತ್ತು ಸಾವಿರ ರನ್ ಪೂರೈಸಿದ ಸ್ಟೀವ್ ಸ್ಮಿತ್, ಅತಿ ಕಡಿಮೆ ಟೆಸ್ಟ್‌ಗಳಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ 101 ಟೆಸ್ಟ್ ಪಂದ್ಯಗಳಲ್ಲಿ 9 ಸಾವಿರ ರನ್ ಪೂರೈಸಿದ್ದ ವೆಸ್ಟ್ ಇಂಡೀಸ್ನ ಶ್ರೇಷ್ಠ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಅವರ ಹೆಸರಿನಲ್ಲಿತ್ತು.
ಇದೀಗ 34 ವರ್ಷದ ಸ್ಟೀವ್ ಸ್ಮಿತ್ ತಮ್ಮ 99ನೇ ಟೆಸ್ಟ್ನ 174ನೇ ಇನ್ನಿಂಗ್ಸ್ನಲ್ಲಿ ಒಂಬತ್ತು ಸಾವಿರ ರನ್ ಪೂರೈಸುವುದರೊಂದಿಗೆ ಶ್ರೀಲಂಕಾದ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕಾರ, ಭಾರತದ ಲೆಜೆಂಡರಿ ಜೋಡಿಗಳಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದ್ದಾರೆ.
ಟೆಸ್ಟ್‌ನಲ್ಲಿ 9000 ರನ್ ಪೂರೈಸಲು ಕುಮಾರ ಸಂಗಕ್ಕಾರ 172 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 111 ಪಂದ್ಯಗಳಲ್ಲಿ 9 ಸಾವಿರ ಟೆಸ್ಟ್ ರನ್ ಪೂರೈಸಿದ್ದರು.
ಹಾಗೆಯೇ ಟೀಂ ಇಂಡಿಯಾದ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 104 ಪಂದ್ಯಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು.
ಇವರೊಂದಿಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 177 ಇನ್ನಿಂಗ್ಸ್‌ಗಳಲ್ಲಿ ಒಂಬತ್ತು ಸಾವಿರ ರನ್ ಪೂರೈಸಿದ್ದರು. ಇದೀಗ 99 ಟೆಸ್ಟ್ ಪಂದ್ಯಗಳಲ್ಲಿ ಒಂಬತ್ತು ಸಾವಿರ ರನ್ ಬಾರಿಸುವುದರೊಂದಿಗೆ ಸ್ಟೀವ್ ಸ್ಮಿತ್ ಈ ದಿಗ್ಗಜರನ್ನು ಹಿಂದಿಕ್ಕಿದ್ದಾರೆ.
Published On - 9:39 am, Thu, 29 June 23