ರಿಷಭ್ ಪಂತ್ ಟೆಸ್ಟ್ ಕೆರಿಯರ್ ಆರಂಭಿಸಿ 6 ವರ್ಷಗಳು ಕಳೆದಿವೆ. ಈ ಆರು ವರ್ಷಗಳಲ್ಲಿ 41 ಪಂದ್ಯಗಳನ್ನಾಡಿರುವ ಪಂತ್ 80 ಇನಿಂಗ್ಸ್ಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಈ ವೇಳೆ 150 ಮಂದಿಯನ್ನು ಔಟ್ ಮಾಡುವಲ್ಲಿ ರಿಷಭ್ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಉಸ್ಮಾನ್ ಖ್ವಾಜಾ (21) ಕ್ಯಾಚ್ ಹಿಡಿಯುವುದರೊಂದಿಗೆ ರಿಷಭ್ ಪಂತ್ 150ನೇ ಬಲಿ ಪಡೆದ ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಮೈಲುಗಲ್ಲು ಮುಟ್ಟಿದ ಭಾರತದ ಮೂರನೇ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.
ಅಂದರೆ 92 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಪರ ಕೇವಲ ಮೂವರು ವಿಕೆಟ್ ಕೀಪರ್ಗಳು ಮಾತ್ರ 150+ ಗಿಂತ ಹೆಚ್ಚು ಆಟಗಾರರನ್ನು ಔಟ್ ಮಾಡಿದ್ದಾರೆ. ಇವರಲ್ಲಿ ಅಗ್ರಸ್ಥಾನದಲ್ಲಿರುವುದು ಸರ್ವಶ್ರೇಷ್ಠ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ.
2005 ರಿಂದ 2014 ನಡುವೆ ಟೀಮ್ ಇಂಡಿಯಾ ಪರ 90 ಟೆಸ್ಟ್ ಪಂದ್ಯಗಳಲ್ಲಿ 166 ಇನಿಂಗ್ಸ್ ಆಡಿರುವ ಮಹೇಂದ್ರ ಸಿಂಗ್ ಧೋನಿ 256 ಕ್ಯಾಚ್ ಹಾಗೂ 38 ಸ್ಟಂಪ್ಗಳನ್ನು ಮಾಡಿದ್ದಾರೆ. ಈ ಮೂಲಕ ಒಟ್ಟು 294 ಬ್ಯಾಟರ್ಗಳನ್ನು ಔಟ್ ಮಾಡಿ ದಾಖಲೆ ನಿರ್ಮಿಸಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಸೈಯ್ಯದ್ ಕಿರ್ಮಾನಿ. 1976 ರಿಂದ 1986 ರ ನಡುವೆ ಟೀಮ್ ಇಂಡಿಯಾ ಪರ 88 ಟೆಸ್ಟ್ ಪಂದ್ಯಗಳಲ್ಲಿ 151 ಇನಿಂಗ್ಸ್ ಆಡಿರುವ ಕಿರ್ಮಾನಿ 160 ಕ್ಯಾಚ್ ಹಾಗೂ 38 ಸ್ಟಂಪ್ಗಳೊಂದಿಗೆ ಒಟ್ಟು 198 ಬಲಿ ಪಡೆದಿದ್ದಾರೆ.
ಇದೀಗ ಈ ಸಾಧಕರ ಪಟ್ಟಿಗೆ ರಿಷಭ್ ಪಂತ್ ಕೂಡ ಸೇರ್ಪಡೆಯಾಗಿದ್ದಾರೆ. ಈವರೆಗೆ 41* ಟೆಸ್ಟ್ ಪಂದ್ಯಗಳನ್ನಾಡಿರುವ ರಿಷಭ್ ಪಂತ್ 80 ಇನಿಂಗ್ಸ್ಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದು, ಈ ವೇಳೆ 137 ಕ್ಯಾಚ್ ಹಾಗೂ 15 ಸ್ಟಂಪ್ಗಳನ್ನು ಮಾಡಿದ್ದಾರೆ. ಈ ಮೂಲಕ ಒಟ್ಟು 151 ಬ್ಯಾಟರ್ಗಳನ್ನು ಔಟ್ ಮಾಡಿದ ವಿಶೇಷ ಮೈಲುಗಲ್ಲು ದಾಟಿದ್ದಾರೆ.