Updated on: Jul 11, 2023 | 8:30 PM
TNPL 2023: ತಮಿಳುನಾಡು ಪ್ರೀಮಿಯರ್ ಲೀಗ್ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಯುವ ದಾಂಡಿಗ ರಿತಿಕ್ ಈಶ್ವರನ್ ಹೊಸ ಸಂಚಲನ ಸೃಷ್ಟಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಿಂಡಿಗಲ್ ಡ್ರಾಗನ್ಸ್ ಪರ ಶಿವಂ ಸಿಂಗ್ (76) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದ ನೆರವಿನಿಂದ ದಿಂಡಿಗಲ್ ಡ್ರಾಗನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಪೇರಿಸಿತ್ತು.
186 ರನ್ಗಳ ಗುರಿ ಪಡೆದ ನೆಲ್ಲೈ ರಾಯಲ್ ಕಿಂಗ್ಸ್ ಪರ ಅಜಿತೇಶ್ ಗುರುಸ್ವಾಮಿ (73) ಸ್ಪೋಟಕ ಅರ್ಧಶತಕ ಬಾರಿಸಿದ್ದರು. ಪರಿಣಾಮ ಕೊನೆಯ 12 ಎಸೆತಗಳಲ್ಲಿ ನೆಲ್ಲೈ ರಾಯಲ್ಸ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 37 ರನ್ಗಳ ಅವಶ್ಯಕತೆಯಿತ್ತು.
ಅತ್ತ ರಿತಿಕ್ ಈಶ್ವರನ್ ಎದುರಿಸಿದ ಮೊದಲ 4 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 7 ರನ್ ಮಾತ್ರ. ಹೀಗಾಗಿಯೇ 12 ಎಸೆತಗಳಲ್ಲಿ 37 ರನ್ ಬಾರಿಸುವುದು ಕಷ್ಟಸಾಧ್ಯ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ 19ನೇ ಓವರ್ ಶುರುವಾಗುತ್ತಿದ್ದಂತೆ 21 ವರ್ಷದ ರಿತಿಕ್ ರೌದ್ರಾವತಾರ ತೋರಿಸಲಾರಂಭಿಸಿದ್ದನು.
ಜಿ. ಕಿಶೋರ್ ಎಸೆದ 19ನೇ ಓವರ್ನ ಮೊದಲ ಮೂರು ಎಸೆತಗಳಲ್ಲಿ ರಿತಿಕ್ ಈಶ್ವರನ್ ಬ್ಯಾಕ್ ಟು ಬ್ಯಾಕ್ 3 ಸಿಕ್ಸ್ ಸಿಡಿಸಿದರು. ಅಲ್ಲದೆ 4ನೇ ಎಸೆತದಲ್ಲಿ 1 ರನ್ ಓಡಿದರು. 5ನೇ ಎಸೆತದಲ್ಲಿ ಅಜಿತೇಶ್ ಸಿಕ್ಸ್ ಬಾರಿಸಿದರು. 6ನೇ ಎಸೆತ ನೋಬಾಲ್...1 ರನ್ ಓಡಿದರು. ಇನ್ನು ಕೊನೆಯ ಎಸೆತದಲ್ಲಿ ಮತ್ತೆ ಸ್ಟ್ರೈಕ್ಗೆ ಬಂದ ರಿತಿಕ್ ಭರ್ಜರಿ ಸಿಕ್ಸ್ ಸಿಡಿಸಿದರು.
ಅಂದರೆ ನೆಲ್ಲೈ ರಾಯಲ್ ಕಿಂಗ್ಸ್ 19ನೇ ಓವರ್ನಲ್ಲಿ 33 ರನ್ ಕಲೆಹಾಕಿದರು. ಇದರಲ್ಲಿ ರಿತಿಕ್ ಈಶ್ವರನ್ ಪಾಲು ಬರೋಬ್ಬರಿ 25 ರನ್ಗಳು. ಪರಿಣಾಮ ಕೊನೆಯ ಓವರ್ನಲ್ಲಿ ಕೇವಲ 4 ರನ್ಗಳ ಟಾರ್ಗೆಟ್ ಪಡೆಯಿತು.
ಸುಬೋತ್ ಭಾಟಿ ಎಸೆದ ಕೊನೆಯ ಓವರ್ನ ಮೊದಲ ಎಸೆತದಲ್ಲಿ ಅಜಿತೇಶ್ ಸಿಂಗಲ್ ತೆಗೆದರು. 2ನೇ ಎಸೆತದಲ್ಲಿ ರಿತಿಕ್ 1 ರನ್ ಕಲೆಹಾಕಿದರು. ಆದರೆ 3ನೇ ಹಾಗೂ 4ನೇ ಎಸೆತಗಳಲ್ಲಿ ರನ್ ಕಲೆಹಾಕುವಲ್ಲಿ ಅಜಿತೇಶ್ ವಿಫಲರಾದರು. ಅಲ್ಲದೆ 5ನೇ ಎಸೆತದಲ್ಲಿ 1 ರನ್ ಓಡಿದರು.
ಕೊನೆಯ ಎಸೆತದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ ತಂಡಕ್ಕೆ ಗೆಲ್ಲಲು ಒಂದು ರನ್ಗಳ ಅವಶ್ಯಕತೆ. ಎಲ್ಲರೂ ರಿತಿಕ್ ಬ್ಯಾಟ್ನಿಂದ ಸಿಂಗಲ್ನ ನಿರೀಕ್ಷೆಯಲ್ಲಿದ್ದರು. ಆದರೆ ಲಾ ಫುಲ್ ಟಾಸ್ ಎಸೆತವನ್ನು ಲೆಗ್ ಸೈಡ್ನತ್ತ ಸಿಕ್ಸ್ ಬಾರಿಸುವ ಮೂಲಕ ಯುವ ಎಡಗೈ ದಾಂಡಿಗ ರಿತಿಕ್ ಈಶ್ವರನ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ತಮಿಳುನಾಡು ಪ್ರೀಮಿಯರ್ ಲೀಗ್ನ ಹೊಸ ಹೀರೋ ಆಗಿ ರಿತಿಕ್ ಈಶ್ವರನ್ ಹೊರಹೊಮ್ಮಿದ್ದಾರೆ.
ಇನ್ನು ಈ ಗೆಲುವಿನೊಂದಿಗೆ ನೆಲ್ಲೈ ರಾಯಲ್ ಕಿಂಗ್ಸ್ ತಂಡವು ತಮಿಳುನಾಡು ಪ್ರೀಮಿಯರ್ ಲೀಗ್ ಫೈನಲ್ಗೆ ಪ್ರವೇಶಿಸಿದೆ. ಬುಧವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಲೈಕಾ ಕೋವೈ ಕಿಂಗ್ಸ್ ಹಾಗೂ ನೆಲ್ಲೈ ರಾಯಲ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.