Rohit Sharma: ರೋಹಿತ್ ಶರ್ಮಾ ಅಬ್ಬರಕ್ಕೆ ವಾರ್ನರ್ ದಾಖಲೆ ಧೂಳೀಪಟ
India vs Sri Lanka: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 230 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 47.5 ಓವರ್ಗಳಲ್ಲಿ 230 ರನ್ಗಳಿಸಿ ಆಲೌಟ್ ಆಗಿದೆ. ಇದರೊಂದಿಗೆ ಭಾರತ ಮತ್ತು ಶ್ರೀಲಂಕಾ ನಡುವಣ ಮೊದಲ ಏಕದಿನ ಪಂದ್ಯವು ಟೈನಲ್ಲಿ ಅಂತ್ಯಕಂಡಿದೆ. ಇದೇ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ ರೋಹಿತ್ ಶರ್ಮಾ ವಿಶೇಷ ದಾಖಲೆ ಬರೆದಿದ್ದಾರೆ.
1 / 6
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ವಿಶೇಷ ದಾಖಲೆ ಬರೆದಿದ್ದಾರೆ. ಅದು ಸಹ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಅವರ ಸರ್ವಶ್ರೇಷ್ಠ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
2 / 6
ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 47 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 58 ರನ್ ಬಾರಿಸಿದ್ದರು. ಈ 58 ರನ್ಗಳೊಂದಿಗೆ ಹಿಟ್ಮ್ಯಾನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆರಂಭಿಕನಾಗಿ 15 ಸಾವಿರ ರನ್ ಕಲೆಹಾಕಿದ 10ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
3 / 6
ಅದರಲ್ಲೂ ಆರಂಭಿಕನಾಗಿ ಅತೀ ವೇಗವಾಗಿ 15 ಸಾವಿರ ರನ್ ಪೂರೈಸಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ರೋಹಿತ್ ಶರ್ಮಾ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಆಸೀಸ್ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಅವರ ಹೆಸರಿನಲ್ಲಿತ್ತು.
4 / 6
ಆಸ್ಟ್ರೇಲಿಯಾ ಪರ ಏಕದಿನ, ಟಿ20 ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ಡೇವಿಡ್ ವಾರ್ನರ್ 15 ಸಾವಿರ ರನ್ ಪೂರೈಸಲು 361 ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದರು. ಈ ಮೂಲಕ ಅತೀ ವೇಗವಾಗಿ 15000 ರನ್ ಕಲೆಹಾಕಿದ ವಿಶ್ವದ 2ನೇ ಓಪನರ್ ಎನಿಸಿಕೊಂಡಿದ್ದರು.
5 / 6
ಇದೀಗ ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿ ರೋಹಿತ್ ಶರ್ಮಾ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಟೀಮ್ ಇಂಡಿಯಾ ಪರ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ಇನಿಂಗ್ಸ್ ಆರಂಭಿಸಿರುವ ರೋಹಿತ್ ಶರ್ಮಾ ಕೇವಲ 352 ಇನಿಂಗ್ಸ್ಗಳ ಮೂಲಕ 15 ಸಾವಿರ ರನ್ ಕಲೆಹಾಕಿದ್ದಾರೆ. ಈ ಮೂಲಕ ವಾರ್ನರ್ ದಾಖಲೆ ಮುರಿದು ಅತೀ ವೇಗವಾಗಿ 15000 ರನ್ ಕಲೆಹಾಕಿದ ವಿಶ್ವದ 2ನೇ ಆರಂಭಿಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
6 / 6
ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಟೀಮ್ ಇಂಡಿಯಾ ಪರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಬ್ಯಾಟ್ ಬೀಸಿರುವ ಸಚಿನ್, ಕೇವಲ 331 ಇನಿಂಗ್ಸ್ಗಳ ಮೂಲಕ 15 ಸಾವಿರ ಪೂರೈಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 15000 ರನ್ ಕಲೆಹಾಕಿದ ಓಪನರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.