
ಸೌತ್ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೊಸ ಇತಿಹಾಸ ಬರೆದಿದ್ದಾರೆ.

ಅಂದರೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಯಶಸ್ವಿ ನಾಯಕನಾಗಿ ಗುರುತಿಸಿಕೊಳ್ಳುತ್ತಿರುವ ರೋಹಿತ್ ಶರ್ಮಾ, ಟಿ20 ಕ್ರಿಕೆಟ್ನಲ್ಲಿ ಒಂದೇ ವರ್ಷದಲ್ಲಿ ಭಾರತಕ್ಕೆ ಅತೀ ಹೆಚ್ಚು ಗೆಲುವು ತಂದುಕೊಟ್ಟ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. ಧೋನಿ 2016 ರಲ್ಲಿ ಟೀಮ್ ಇಂಡಿಯಾವನ್ನು 15 ಪಂದ್ಯಗಳಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಇದೀಗ ಈ ದಾಖಲೆಯನ್ನು ಹಿಟ್ಮ್ಯಾನ್ ಮುರಿದಿರುವುದು ವಿಶೇಷ.

ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಗೆಲುವಿನೊಂದಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಈ ವರ್ಷ 16 ಟಿ20 ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಧೋನಿ 6 ವರ್ಷಗಳ ಹಿಂದೆ ಬರೆದಿದ್ದ ದಾಖಲೆಯನ್ನು ಅಳಿಸಿ ಹಾಕಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡದ ಅತ್ಯಂತ ಯಶಸ್ವಿ ನಾಯಕರುಗಳ ಪಟ್ಟಿಯಲ್ಲಿ ಇದೀಗ ಹಿಟ್ಮ್ಯಾನ್ 2ನೇ ಸ್ಥಾನಕ್ಕೇರಿದ್ದಾರೆ.

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರತ ತಂಡವನ್ನು 50 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಭಾರತ ತಂಡ 32 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು 16 ಪಂದ್ಯಗಳಲ್ಲಿ ಸೋತರೆ, 2 ಪಂದ್ಯಗಳು ಟೈ ಆಗಿತ್ತು. ಹಾಗೆಯೇ ಮತ್ತೆರೆಡು ಪಂದ್ಯಗಳಲ್ಲಿ ಫಲಿತಾಂಶ ಹೊರಬಂದಿರಲಿಲ್ಲ.

ಇದೀಗ 43 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ ಟೀಮ್ ಇಂಡಿಯಾಗೆ 34 ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯ 32 ಗೆಲುವುಗಳ ದಾಖಲೆಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ.

ಇನ್ನು ಟೀಮ್ ಇಂಡಿಯಾದ ಟಿ20 ಯಶಸ್ವಿ ನಾಯಕರುಗಳ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಅಗ್ರಸ್ಥಾನದಲ್ಲಿದ್ದಾರೆ. 72 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಧೋನಿ, 41 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಹಾಗೆಯೇ 28 ಪಂದ್ಯಗಳಲ್ಲಿ ಸೋತರೆ, 1 ಪಂದ್ಯವು ಟೈ ಆಗಿತ್ತು. ಹಾಗೆಯೇ ಮತ್ತೆರಡು ಪಂದ್ಯಗಳಲ್ಲಿ ಫಲಿತಾಂಶ ಮೂಡಿಬಂದಿರಲಿಲ್ಲ.

ಸದ್ಯ ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ರೋಹಿತ್ ಶರ್ಮಾ 43 ಟಿ20 ಪಂದ್ಯಗಳಲ್ಲಿ 34 ಬಾರಿ ಗೆಲುವಿನ ನಗೆ ಬೀರಿದಿದ್ದಾರೆ. ಇನ್ನು ಹಿಟ್ಮ್ಯಾನ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸೋತಿರುವುದು ಕೇವಲ 9 ಬಾರಿ ಮಾತ್ರ. ಸದ್ಯ ಧೋನಿಯ ದಾಖಲೆ ಮುರಿಯಲು ರೋಹಿತ್ ಶರ್ಮಾಗೆ 8 ಗೆಲುವಿನ ಅವಶ್ಯಕತೆಯಿದ್ದು, ಅದು ಟಿ20 ವಿಶ್ವಕಪ್ ಮೂಲಕ ಈಡೇರಲಿದೆಯಾ ಕಾದು ನೋಡಬೇಕಿದೆ.