
ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ನೆದರ್ಲೆಂಡ್ ನಡುವಿನ ವಿಶ್ವಕಪ್ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅರ್ಧಶತಕದ ಇನ್ನಿಂಗ್ಸ್ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಡಚ್ಚರ ವಿರುದ್ಧ ತಮ್ಮ ಇನ್ನಿಂಗ್ಸ್ನಲ್ಲಿ 54 ಎಸೆತಗಳನ್ನು ಎದುರಿಸಿದ ರೋಹಿತ್ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 61 ರನ್ ಚಚ್ಚಿದರು. ಆದರೆ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು. ಆದರೆ ತಮ್ಮ ಅರ್ಧಶತಕದ ಇನ್ನಿಂಗ್ಸ್ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು.

ನೆದರ್ಲೆಂಡ್ಸ್ ವಿರುದ್ಧ ರನ್ ದಾಖಲಿಸಿದ ಕೂಡಲೇ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆರಂಭಿಕರಾಗಿ 14000 ರನ್ ಪೂರೈಸಿದರು. ಈ ಮೂಲಕ ಈ ಸಾಧನೆ ಮಾಡಿದ ಮೂರನೇ ಭಾರತೀಯ ಎನಿಸಿಕೊಂಡರು.

ರೋಹಿತ್ ಶರ್ಮಾ ಮೊದಲು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಭಾರತದ ಪರ ಈ ಸಾಧನೆ ಮಾಡಿದ್ದರು.

ಅಲ್ಲದೆ ನೆದರ್ಲೆಂಡ್ಸ್ ವಿರುದ್ಧ 2 ಸಿಕ್ಸರ್ ಬಾರಿಸಿದ ರೋಹಿತ್ ಶರ್ಮಾ ಒಂದು ಕ್ಯಾಲೆಂಡರ್ ವರ್ಷದಲ್ಲಿ ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (59) ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಹಿಂದೆ 2015 ರಲ್ಲಿ 58 ಸಿಕ್ಸರ್‌ಗಳನ್ನು ಬಾರಿಸಿದ್ದ ಡಿವಿಲಿಯರ್ಸ್ ಅಗ್ರಸ್ಥಾನದಲ್ಲಿದ್ದರು.

ನೆದರ್ಲೆಂಡ್ಸ್ ವಿರುದ್ಧ 61 ರನ್ಗಳ ಇನ್ನಿಂಗ್ಸ್ ಆಡಿದ ರೋಹಿತ್ ಶರ್ಮಾ ಅವರಿಗೆ ಇದು 100ನೇ ಅಂತಾರಾಷ್ಟ್ರೀಯ ಅರ್ಧಶತಕವಾಗಿದೆ. ರೋಹಿತ್ ಏಕದಿನದಲ್ಲಿ 55, ಟೆಸ್ಟ್‌ನಲ್ಲಿ 16 ಮತ್ತು ಟಿ20ಯಲ್ಲಿ 29 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಹಾಗೆಯೇ ರೋಹಿತ್ ಶರ್ಮಾ 2023 ರ ಏಕದಿನ ವಿಶ್ವಕಪ್ ಆವೃತ್ತಿಯಲ್ಲಿ 500 ರನ್ ಪೂರೈಸಿದರು. ಇದರೊಂದಿಗೆ ಸಚಿನ್ ತೆಂಡೂಲ್ಕರ್ ನಂತರ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅಧಿಕ ಬಾರಿ 500 ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.