ಭಾರತ ತಂಡ ತವರಿನಲ್ಲಿ ಟೆಸ್ಟ್ ಸರಣಿ ಸೋತು ಬರೋಬ್ಬರಿ 12 ವರ್ಷಗಳೇ ಕಳೆದಿತ್ತು. ಆದರೆ ಈ ಹನ್ನೆರಡು ವರ್ಷಗಳ ಸರಣಿ ಗೆಲುವಿನ ನಾಗಾಲೋಟಕ್ಕೆ ಶನಿವಾರ ತೆರೆಬಿದ್ದಿದೆ. ಅದು ಕೂಡ ಕೇನ್ ವಿಲಿಯಮ್ಸನ್, ಟ್ರೆಂಟ್ ಬೌಲ್ಟ್ ಇಲ್ಲದ ನ್ಯೂಝಿಲೆಂಡ್ ವಿರುದ್ಧ ಸೋಲುವ ಮೂಲಕ ಎಂಬುದೇ ಅಚ್ಚರಿ.
ವಿಶೇಷ ಎಂದರೆ ಟೀಮ್ ಇಂಡಿಯಾದ ಈ ಸರಣಿ ಗೆಲುವಿನ ನಾಗಾಲೋಟಕ್ಕೆ ನಾಂದಿಯಾಡಿದ್ದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. 2008 ರಿಂದ 2014 ರವರೆಗೆ ಧೋನಿ ತವರಿನಲ್ಲಿ ಭಾರತ ಟೆಸ್ಟ್ ತಂಡವನ್ನು 11 ಸರಣಿಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ 2012 ರಲ್ಲಿ ಇಂಗ್ಲೆಂಡ್ ವಿರುದ್ಧ ಮಾತ್ರ ಸರಣಿ ಸೋತಿತ್ತು.
ಇದಾದ ಬಳಿಕ ಭಾರತ ತಂಡದ ವಿಜಯಯಾತ್ರೆಗೆ ಮುನ್ನುಡಿ ಬರೆದಿದ್ದು ವಿರಾಟ್ ಕೊಹ್ಲಿ. 2014 ರಲ್ಲಿ ಟೆಸ್ಟ್ ತಂಡದ ನಾಯಕರಾದ ಕಿಂಗ್ ಕೊಹ್ಲಿ ಮುಂದಾಳತ್ವದಲ್ಲಿ ಭಾರತ ತಂಡವು ತವರಿನಲ್ಲಿ ಒಟ್ಟು 11 ಸರಣಿಗಳನ್ನಾಡಲಿದೆ. ಈ ವೇಳೆ ಟೀಮ್ ಇಂಡಿಯಾ ಒಮ್ಮೆಯೂ ಸೋತಿಲ್ಲ ಎಂಬುದು ವಿಶೇಷ.
2021 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಟೀಮ್ ಇಂಡಿಯಾ ಕ್ಯಾಪ್ಟನ್ಸಿ ರೋಹಿತ್ ಶರ್ಮಾ ಪಾಲಾಯಿತು. ಕೊಹ್ಲಿ ಆರಂಭಿಸಿದ ಸರಣಿ ಗೆಲುವಿನ ನಾಗಾಲೋಟವನ್ನು ಹಿಟ್ಮ್ಯಾನ್ ಮುಂದುವರೆಸಿದರೂ, ಇದೀಗ 5ನೇ ಸರಣಿಯಲ್ಲೇ ಮುಗ್ಗರಿಸಿದ್ದಾರೆ.
ಅಂದರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ತವರಿನಲ್ಲಿ 5 ಟೆಸ್ಟ್ ಸರಣಿಗಳನ್ನು ಆಡಿದೆ. ಈ ಐದು ಸರಣಿಗಳ ನಡುವೆಯೇ ಹಿಟ್ಮ್ಯಾನ್ ಮುಂದಾಳತ್ವದ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧ ಪರಾಜಯಗೊಂಡಿದೆ. ಈ ಮೂಲಕ 12 ವರ್ಷಗಳ ಬಳಿಕ ಟೀಮ್ ಇಂಡಿಯಾ ಭಾರತದಲ್ಲಿ ಸರಣಿ ಸೋತಿದೆ. ಇದರೊಂದಿಗೆ ವಿರಾಟ್ ಕೊಹ್ಲಿ ಆರಂಭಿಸಿದ ಸರಣಿ ಗೆಲುವಿನ ನಾಗಾಲೋಟಕ್ಕೂ ತೆರೆ ಬಿದ್ದಂತಾಗಿದೆ.