Updated on: Jan 10, 2023 | 9:53 PM
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು.
ಅದರಲ್ಲೂ 67 ಎಸೆತಗಳಲ್ಲಿ ಸ್ಪೋಟಕ ಇನಿಂಗ್ಸ್ ಕಟ್ಟಿದ ಹಿಟ್ಮ್ಯಾನ್ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್ನೊಂದಿಗೆ 83 ರನ್ ಚಚ್ಚಿದ್ದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಆರಂಭಿಕನಾಗಿ ರೋಹಿತ್ ಶರ್ಮಾ 7500 ರನ್ ಪೂರೈಸಿದರು. ಇದರೊಂದಿಗೆ ಒನ್ಡೇ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 7500 ರನ್ ಬಾರಿಸಿದ ಆರಂಭಿಕ ಆಟಗಾರ ಎನಿಸಿಕೊಂಡರು.
ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಸೌತ್ ಆಫ್ರಿಕಾದ ಮಾಜಿ ಆರಂಭಿಕ ಆಟಗಾರ ಹಾಶಿಮ್ ಆಮ್ಲ ಹೆಸರಿನಲ್ಲಿತ್ತು. ಆಮ್ಲ 158 ಇನಿಂಗ್ಸ್ ಮೂಲಕ ಏಕದಿನ ಕ್ರಿಕೆಟ್ನಲ್ಲಿ 7500 ರನ್ ಪೂರೈಸಿದ್ದರು. ಇದೀಗ ಈ ದಾಖಲೆಯನ್ನು ರೋಹಿತ್ ಶರ್ಮಾ ಮುರಿದಿದ್ದಾರೆ.
ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪರ ಕೂಡ ಅತ್ಯಂತ ವೇಗವಾಗಿ 7500 ರನ್ ಕಲೆಹಾಕಿದ ಓಪನಿಂಗ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಹಿಂದೆ 170 ಇನಿಂಗ್ಸ್ ಮೂಲಕ ಸಚಿನ್ ತೆಂಡೂಲ್ಕರ್ ಆರಂಭಿಕನ ಸ್ಥಾನದಲ್ಲಿ ಏಳು ಸಾವಿರದ ಐನೂರು ರನ್ ಕಲೆಹಾಕಿದ್ದರು.
ಹಾಗೆಯೇ ಸೌರವ್ ಗಂಗೂಲಿ 182 ಏಕದಿನ ಇನಿಂಗ್ಸ್ನಲ್ಲಿ ಆರಂಭಿಕರಾಗಿ 7500 ರನ್ ಬಾರಿಸಿದ್ದರು. ಇದೀಗ ಇವರೆಲ್ಲರನ್ನೂ ಹಿಂದಿಕ್ಕುವ ಮೂಲಕ ರೋಹಿತ್ ಶರ್ಮಾ ಕೇವಲ 149 ಇನಿಂಗ್ಸ್ನಲ್ಲಿ 7500 ರನ್ ಚಚ್ಚಿದ್ದಾರೆ.
ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಅತ್ಯಂತ ವೇಗವಾಗಿ 7500 ರನ್ ಬಾರಿಸಿದ ವಿಶ್ವ ದಾಖಲೆಯನ್ನು ರೋಹಿತ್ ಶರ್ಮಾ ನಿರ್ಮಿಸಿದ್ದಾರೆ.