ಬಾಂಗ್ಲಾದೇಶ ಪ್ರವಾಸದಲ್ಲಿರುವ ಭಾರತಕ್ಕೆ ಒಂದರ ಹಿಂದೆ ಒಂದರಂತೆ ಆಘಾತ ಉಂಟಾಗುತ್ತಲೇ ಇದೆ. ಒಂದುಕಡೆ ಸೋಲಿನ ಶಾಕ್ಗೆ ಸಿಲುಕಿ ಟೀಮ್ ಇಂಡಿಯಾ ಸರಣಿ ಕಳೆದುಕೊಂಡರೆ ಮತ್ತೊಂದೆಡೆ ಇಂಜುರಿ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರಣಿ ಆರಂಭಕ್ಕೂ ಮುನ್ನ ಮೊಹಮ್ಮದ್ ಶಮಿ ಹಾಗೂ ರಿಷಭ್ ಪಂತ್ ಅಲಭ್ಯರಾದರು. ಇದೀಗ ಮೂವರು ಆಟಗಾರರು ಪುನಃ ಇಂಜುರಿಯಾಗಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಿಂದ ನಾಯಕ ರೋಹಿತ್ ಶರ್ಮಾ, ದೀಪಕ್ ಚಹರ್ ಮತ್ತು ಕುಲ್ದೀಪ್ ಸೇನ್ ಹೊರಬಿದ್ದಿದ್ದಾರೆ. ಇಂಜುರಿಗೆ ತುತ್ತಾಗಿರುವವರು ತೃತೀಯ ಏಕದಿನಕ್ಕೆ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಸೋಲಿನ ಆಘಾತದಲ್ಲಿ ಟೀಮ್ ಇಂಡಿಯಾಕ್ಕೆ ಸ್ವತಃ ನಾಯಕ ಸೇರಿ ಪ್ರಮುಖ ಆಟಗಾರರ ಅಲಭ್ಯತೆ ದೊಡ್ಡ ಹೊಡೆತ ನೀಡಿದೆ.
ದ್ವಿತೀಯ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಸ್ಲಿಪ್ ವಿಭಾಗದಲ್ಲಿ ಕ್ಯಾಚ್ ತೆಗೆದುಕೊಳ್ಳುವಾಗ ಎಡಗೈ ಹೆಬ್ಬೆರಳು ಮುರಿದು ಕೊಂಡ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಂದ್ಯದ ಬಹುಪಾಲು ಪೆವಿಲಿಯನ್‌ನಲ್ಲೇ ಇದ್ದರು. ಹೆಬ್ಬೆರಳಿಗೆ ಬ್ಯಾಂಡೇಜ್ ತೊಟ್ಟು ಡಗೌಟ್‌ನಲ್ಲಿ ಕುಳಿತಿದ್ದ ರೋಹಿತ್ ಕೊನೆಯಲ್ಲಿ ಬ್ಯಾಟಿಂಗ್ಗೆ ಬಂದರು.
ದೀಪಕ್ ಚಹರ್ ಅವರು ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ಪಂದ್ಯದ ಮಧ್ಯೆ ನೋವು ಜೋರಾಗಿ ಕಾಣಿಸಿಕೊಂಡ ಕಾರಣ ಇವರು ಕೇವಲ ಮೂರು ಓವರ್ಗಳನ್ನಷ್ಟೆ ಬಾಲ್ ಮಾಡಿದರು. ಹೀಗಾಗಿ ಇವರು ಕೂಡ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಇತ್ತ ಕುಲ್ದೀಪ್ ಸೇನ್ ಬೆನ್ನು ನೋವಿನಿ ಗಾಯದಿಂದ ಔಟಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ, ಕುಲ್ದೀಪ್ ಸೇನ್ ಹಾಗೂ ದೀಪಕ್ ಚಹರ್ ಮುಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಹೇಳಿದ್ದಾರೆ. ಇಂಜುರಿಯಾದ ಆಟಗಾರರು ದೆಹಲಿಗೆ ಹಿಂತಿರುಗಿ, ತಜ್ಞರೊಂದಿಗೆ ಸಮಾಲೋಚಿಸಿ ಗಾಯದ ಪ್ರಮಾಣ ಹೇಗಿದೆ ಎಂದು ಪರೀಕ್ಷಿಸಬೇಕು. ಇವರು ಟೆಸ್ಟ್ ಪಂದ್ಯಗಳಿಗೆ ಹಿಂತಿರುಗಬಹುದೇ ಅಥವಾ ಇಲ್ಲವೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಬಾಂಗ್ಲಾದೇಶ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದ ಭಾರತ ತಂಡ 69 ರನ್‌ಗಳಿಗೆ 6 ವಿಕೆಟ್ ಕಿತ್ತು ಮಿಂಚಿತು. ಆದರೆ, 7ನೇ ವಿಕೆಟ್‌ಗೆ ಮಹ್ಮೂದುಲ್ಲ (77) ಮತ್ತು ಮಹ್ದಿ ಹಸನ್ ಮಿರಾಜ್ (100*) ಶತಕದ ಜೊತೆಯಾಟವಾಡಿ ಬಾಂಗ್ಲಾ ಪಡೆಯನ್ನು ಅಪಾಯದಿಂದ ಪಾರು ಮಾಡಿದರು.
ಬಾಂಗ್ಲಾದೇಶ ಕೊನೆಯ 10 ಓವರ್‌ಗಳಲ್ಲಿ 100ಕ್ಕೂ ಹೆಚ್ಚು ರನ್ ಬಾಚಿಕೊಂಡ ಬಾಂಗ್ಲಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 271 ರನ್‌ಗಳ ದೊಡ್ಡ ಮೊತ್ತ ದಾಖಲಿಸಿತು. ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಕಣಕ್ಕಿಳಿದು ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು.
ಮೂರನೇ ಕ್ರಮಾಂಕದಲ್ಲಿ ಕ್ರೀಸಿಗೆ ಬಂದಿದ್ದ ಶ್ರೇಯಸ್ ಅಯ್ಯರ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರು. ಆದರೆ, ಶ್ರೇಯಸ್ಗೆ ಸರಿಯಾದ ಸಾಥ್ ಸಿಗಲಿಲ್ಲ. ವಾಷಿಂಗ್ಟನ್ ಸುಂದರ್ (11), ಕೆಎಲ್ ರಾಹುಲ್ (14) ಬೇಗ ಔಟಾದರು. ನಂತರ ಶ್ರೇಯಸ್ ಜೊತೆಗೂಡಿದ ಅಕ್ಷರ್ ಪಟೇಲ್ ಕೊಂಚ ಬಿರುಸಿನಿಂದಲೇ ಬ್ಯಾಟ್ ಬೀಸಿದರು. ಈ ಜೋಡಿ ನೂರು ರನ್‌ಗಳ ಜೊತೆಯಾಟ ನೀಡಿ, ತಂಡಕ್ಕೆ ಆಸರೆಯಾದರು.
ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್, ಶಕೀಬ್ ಅಲ್ ಹಸನ್ ಬೌಲಿಂಗ್ನಲ್ಲಿ ಕಾಚಿತ್ತರು. 102 ಎಸೆತಗಳನ್ನು ಎದುರಿಸಿದ ಶ್ರೇಯಸ್ 3 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ 82 ರನ್ ಸಿಡಿಸಿದರು. ಇದರ ಬೆನ್ನಲ್ಲೇ 56 ರನ್ ಸಿಡಿಸಿದ್ದ ಅಕ್ಷರ್ ಪಟೇಲ್ ಕೂಡ ಔಟಾಗುವ ಮೂಲಕ ತಂಡಕ್ಕೆ ಆಘಾತ ನೀಡಿದರು.
ಕೊನೆಯಲ್ಲಿ ಹೆಬ್ಬೆರಳಿಗೆ ಬಿಗಿಯಾಗಿ ಬ್ಯಾಡೇಜ್ ತೊಟ್ಟೇ ಬ್ಯಾಟ್ ಬೀಸಿದ ರೋಹಿತ್ ದೈತ್ಯ ಹೊಡೆತಗಳನ್ನು ಹೊರತಂದು ಭಾರತ ತಂಡವನ್ನು ಜಯದ ದಡದತ್ತ ಕೊಂಡೊಯ್ದರು. 28 ಎಸೆತಗಳಲ್ಲಿ 3 ಫೋರ್ ಮತ್ತು 5 ಸಿಕ್ಸರ್‌ಗಳೊಂದಿಗೆ ಅಜೇಯ 51 ರನ್ ಸಿಡಿಸಿದರೂ, ಭಾರತ ತಂಡ ಕೊನೆಗೆ 5 ರನ್‌ಗಳ ಅಂತರದ ವೀರೋಚಿತ ಸೋಲು ಕಂಡು ಸರಣಿಯನ್ನೂ ಕಳೆದುಕೊಂಡಿತು.