
ಟೀಮ್ ಇಂಡಿಯಾದಲ್ಲಿ (Team India) ಎಲ್ಲವೂ ಸರಿಯಿಲ್ಲವಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಭಾರತೀಯ ಕ್ರಿಕೆಟ್ ಮಂಡಳಿ ತುರ್ತು ಸಭೆ ಕರೆದಿರುವುದು. ಅದು ಕೂಡ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಏಕದಿನ ಸರಣಿ ಮಧ್ಯೆದಲ್ಲಿ..!

ಹೌದು, ರಾಂಚಿಯಲ್ಲಿ ನಡೆದ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೊದಲ ಪಂದ್ಯ ಮುಗಿದ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್ನಲ್ಲಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಜೊತೆ ರೋಹಿತ್ ಶರ್ಮಾ ವಾಗ್ವಾದ ನಡೆಸುತ್ತಿರುವಂತೆ ಕಂಡು ಬಂದಿದೆ.

ರೋಹಿತ್ ಶರ್ಮಾ ಅದೇನೋ ವಾದಿಸುತ್ತಿರುವಂತೆ ಕಂಡು ಬಂದರೂ ಅತ್ತ ಕಡೆ ಗೌತಮ್ ಗಂಭೀರ್ ಕೂಡ ಗಂಭೀರವಾಗಿ ನಿಂತಿರುವ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಗಂಭೀರ್ ಹಾಗೂ ರೋಹಿತ್ ನಡುವೆ ಎಲ್ಲವೂ ಸರಿಯಿಲ್ಲವಾ? ಎಂಬ ಪ್ರಶ್ನೆಯೊಂದು ಮೂಡಿದೆ.

ಅದರಲ್ಲೂ ಪಂದ್ಯ ಗೆದ್ದ ಬಳಿಕ ಎಲ್ಲರೂ ಖುಷಿಯಲ್ಲಿರಬೇಕಾದರೆ, ರೋಹಿತ್ ಶರ್ಮಾ ಹಾಗೂ ಗೌತಮ್ ಗಂಭೀರ್ ಗಂಭೀರವಾಗಿ ಚರ್ಚಿಸುತ್ತಿರುವುದೇ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಬಿಸಿಸಿಐ ಕಡೆಯಿಂದ ಮತ್ತೊಂದು ಮಾಹಿತಿ ಹೊರಬಿದ್ದಿದೆ.

ಬಿಸಿಸಿಐ ದ್ವಿತೀಯ ಏಕದಿನ ಪಂದ್ಯಕ್ಕೂ ಮುನ್ನ ತುರ್ತು ಸಭೆ ಕರೆದಿದೆ. ಈ ಸಭೆಯಲ್ಲಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇಂತಹದೊಂದು ಸಭೆ ಕರೆಯಲು ಮುಖ್ಯ ಕಾರಣ ತಂಡದಲ್ಲಿನ ಆತಂರಿಕ ಭಿನ್ನಾಭಿಪ್ರಾಯ ಎಂದು ವರದಿಯಾಗಿದೆ.

ಟೀಮ್ ಇಂಡಿಯಾದಲ್ಲಿರುವ ಹಿರಿಯ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಈ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ, ಹಿರಿಯ ಆಟಗಾರರೊಂದಿಗಿನ ಸಂವಹನ ಸಮಸ್ಯೆಯನ್ನು ನಿವಾರಿಸಲು ಬಿಸಿಸಿಐ ಈ ತುರ್ತು ಸಭೆ ಕರೆದಿದೆ ಎಂದು ತಿಳಿದು ಬಂದಿದೆ.

ಇನ್ನು ಈ ಸಭೆಯಲ್ಲಿ ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾಗವಹಿಸಲಿದ್ದಾರಾ ಎಂಬುದು ಇನ್ನೂ ಸಹ ಖಚಿತವಾಗಿಲ್ಲ. ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಖಚಿತ. ಅದು ಯಾವ ಮಟ್ಟದಲ್ಲಿದೆ ಎಂಬುದು ಮಂಗಳವಾರ ನಡೆಯುವ ಮೀಟಿಂಗ್ನಲ್ಲಿ ಬಹಿರಂಗವಾಗಲಿದೆ.