ಸುಮಾರು 8 ತಿಂಗಳ ಹಿಂದೆ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇಡೀ ದೇಶವನ್ನು ಸಂತೋಷಪಡಿಸಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳೆದ ಕೆಲವು ಸರಣಿಗಳಲ್ಲಿ ಸತತ ಸೋಲುಗಳನ್ನೇ ಎದುರಿಸಬೇಕಾಯಿತು. ಇದರಿಂದಾಗಿ ರೋಹಿತ್ ನಿವೃತ್ತಿ ಘೋಷಿಸಬೇಕೆಂಬ ಕೂಗು ಕೂಡ ಹೆಚ್ಚಾಗಿತ್ತು. ನಾಯಕನಾಗಿ ಮಾತ್ರವಲ್ಲದೆ ರೋಹಿತ್ ಆಟಗಾರನಾಗಿಯೂ ವೈಫಲ್ಯ ಅನುಭವಿಸಿದ್ದರು.
ಆದರೀಗ ನಾಯಕನಾಗಿ ಮತ್ತೊಮ್ಮೆ ಗೆಲುವಿನ ಹಾದಿಗೆ ರೋಹಿತ್ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ರೋಹಿತ್ ಶರ್ಮಾ ಕಳೆದ 6 ಪಂದ್ಯಗಳ ಸೋಲಿನ ಸರಣಿಗೆ ಬ್ರೇಕ್ ಹಾಕಿದ್ದಾರೆ. ಆಟಗಾರನಾಗಿ ರೋಹಿತ್ ಯಶಸ್ವಿಯಾಗದಿದ್ದರೂ ನಾಯಕನಾಗಿ ಯಶಸ್ಸು ಸಾಧಿಸುವಲ್ಲಿ ಸಫಲರಾಗಿದ್ದಾರೆ.
ನಾಗ್ಪುರದಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ 4 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ರೋಹಿತ್ ನಾಯಕನಾಗಿ ಮತ್ತೆ ಗೆಲುವಿನ ಸವಿ ಅನುಭವಿಸಿದ್ದಾರೆ. ವಾಸ್ತವವಾಗಿ ರೋಹಿತ್ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದ ನಂತರ ಟೀಂ ಇಂಡಿಯಾ ಗೆಲುವು ಸಾಧಿಸಿದಕ್ಕಿಂತ ಸೋತಿದ್ದೇ ಹೆಚ್ಚು.
ಟಿ20 ವಿಶ್ವಕಪ್ ಮುಗಿದ ಬಳಿಕ ಬಾಂಗ್ಲಾದೇಶ ವಿರುದ್ಧ ರೋಹಿತ್ ನಾಯಕತ್ವದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದ್ದ ಟೀಂ ಇಂಡಿಯಾ ಆ ಬಳಿಕ ಒಂದೂ ಪಂದ್ಯವನ್ನು ಗೆದ್ದಿಲ್ಲ. 3 ಪಂದ್ಯಗಳ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿದ್ದ ಭಾರತ, ರೋಹಿತ್ ನಾಯಕತ್ವದಲ್ಲಿ ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿತ್ತು.
ಆ ಬಳಿಕ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದಿದ್ದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡ 3-0 ಅಂತರದಿಂದ ಸೋತಿತ್ತು. ವರ್ಷಾಂತ್ಯದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಭಾರತ ಬುಮ್ರಾ ನಾಯಕತ್ವದಲ್ಲಿ ಮೊದಲ ಪಂದ್ಯವನ್ನು ಗೆದ್ದುಕೊಂಡರೆ, ಆ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿದ3 ಟೆಸ್ಟ್‌ಗಳಲ್ಲಿ 2 ರಲ್ಲಿ ಸೋತು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.
ಈ ಪಂದ್ಯದಲ್ಲಿನ ಗೆಲುವಿನೊಂದಿಗೆ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಟೀಂ ಇಂಡಿಯಾದ ಅತ್ಯುತ್ತಮ ನಾಯಕ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ರೋಹಿತ್ ಇದುವರೆಗೆ ಏಕದಿನ ಮಾದರಿಯಲ್ಲಿ 49 ಪಂದ್ಯಗಳಲ್ಲಿ ತಂಡದ ನಾಯಕತ್ವವಹಿಸಿದ್ದು, ಇದರಲ್ಲಿ 35 ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ.
ಇನ್ನು ಇದೇ ಸಂಖ್ಯೆಯ ಅಂದರೆ 49 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಎಂಎಸ್ ಧೋನಿ 30 ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರೆ, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 49 ಏಕದಿನ ಪಂದ್ಯಗಳಲ್ಲಿ 38 ಪಂದ್ಯಗಳನ್ನು ನಾಯಕನಾಗಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.