ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾನುವಾರ ಮಹತ್ವದ ಪಂದ್ಯ ನಡೆಯಲಿದೆ. ಕೋಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ತೆಂಬ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ಪಂದ್ಯಗಳ ನಡುವಣ ಕಾಳಗಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯ ಟೀಮ್ ಇಂಡಿಯಾಕ್ಕೆ ತುಂಬಾ ವಿಶೇಷ.
ನವೆಂಬರ್ 5 ರಂದು ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹುಟ್ಟುಹಬ್ಬ. 35ನೇ ವಸಂತಕ್ಕೆ ಕಾಲಿಡಲಿರುವ ಕೊಹ್ಲಿಯ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಈಗಾಗಲೇ ಸಿಎಬಿ ಭರ್ಜರಿ ತಯಾರಿ ನಡೆಸುತ್ತಿದೆ. ಇದರ ನಡುವೆ ನಾಯಕ ರೋಹಿತ್ ಶರ್ಮಾ ಕೂಡ ಕೊಹ್ಲಿಗೆ ಗೆಲುವಿನ ಉಡುಗೊರೆ ನೀಡಲು ಪ್ಲಾನ್ ರೂಪಿಸಿದ್ದಾರೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಆಡಿರುವ ಎಲ್ಲ ಏಳು ಪಂದ್ಯಗಳಲ್ಲಿ ಗೆದ್ದು ಸೆಮಿ ಫೈನಲ್ಗೆ ಕ್ವಾಲಿಫೈಯರ್ ಆಗಿದೆ. ಇತ್ತ ದ. ಆಫ್ರಿಕಾ ಆಡಿರುವ ಏಳು ಪಂದ್ಯಗಳ ಪೈಕಿ ಆರರಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಹರಿಣಗಳ ಪಡೆ ಭಾರತಕ್ಕೆ ಸುಲಭ ಸವಾಲಂತು ಅಲ್ಲವೇ ಅಲ್ಲ. ಟೀಮ್ ಇಂಡಿಯಾಕ್ಕೆ ಜಯಕೂಡ ಮುಖ್ಯ ಆಗಿರುವ ಕಾರಣ ಹೊಸ ಆಟಗಾರನನ್ನು ಕರೆತರುವ ಪ್ರಯತ್ನ ರೋಹಿತ್ ಮಾಡಬಹುದು.
ದಕ್ಷಿಣ ಆಫ್ರಿಕಾ ಬ್ಯಾಟರ್ಗಳು ಭಾರತೀಯ ಪಿಚ್ನಲ್ಲಿ ಸ್ಪಿನ್ನರ್‌ಗಳ ವಿರುದ್ಧ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ಹೆನ್ರಿಚ್ ಕ್ಲಾಸೆನ್ ಈ ವಿಶ್ವಕಪ್‌ನಲ್ಲಿ ಸ್ಪಿನ್ನರ್‌ಗಳ ವಿರುದ್ಧ ಆರು ಇನ್ನಿಂಗ್ಸ್‌ಗಳಲ್ಲಿ 87 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 140.32 ಆಗಿದೆ. ಹೀಗಾಗಿ ಕುಲ್ದೀಪ್ ಯಾದವ್ರನ್ನು ಕೈಬಿಡುವ ಸಂಭವವಿದೆ.
ಆಫ್ರಿಕಾ ಬ್ಯಾಟರ್ಗಳು ಸ್ಪಿನ್ನರ್ ವಿರುದ್ಧ ಚೆನ್ನಾಗಿ ಆಡುವ ಕಾರಣ ಕುಲ್ದೀಪ್ ಜಾಗಕ್ಕೆ ಪ್ರಸಿದ್ಧ್ ಕೃಷ್ಣ ಅಥವಾ ಶಾರ್ದೂಲ್ ಥಾಕೂರ್ ಎಕ್ಸ್ ಫ್ಯಾಕ್ಟರ್ ಇರುವ ಆಟಗಾರನನ್ನು ಕರೆತಂದು ಕಣಕ್ಕಿಳಿಸಲು ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಚಿಂತನೆ ನಡೆಸಬಹುದು.
ಭಾರತ-ಆಫ್ರಿಕಾ ಪಂದ್ಯದ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿಯ ಬರ್ತ್ಡೇ ಕೇಕ್ ಕಟ್ಟಿಂಗ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಾಗೆಯೇ ವಿರಾಟ್ ಕೊಹ್ಲಿಗೆ ನೆನಪಿನ ಕಾಣಿಕೆಯನ್ನು ನೀಡಲು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಯೋಜಿಸುತ್ತಿದೆ. ಇದಲ್ಲದೆ, ಇನಿಂಗ್ಸ್ ಮಧ್ಯಂತರದಲ್ಲಿ ಪಟಾಕಿ ಪ್ರದರ್ಶನ ಇರಲಿದೆ ಎಂದು ಹೇಳಲಾಗಿದೆ.
ಇನ್ನು ಪಂದ್ಯಕ್ಕಾಗಿ ಸ್ಟೇಡಿಯಂಗೆ ಬರುವ ಪ್ರತಿಯೊಬ್ಬರಿಗೂ ವಿರಾಟ್ ಕೊಹ್ಲಿಯ ಮಾಸ್ಕ್ ನೀಡಲು ಪ್ಲ್ಯಾನ್ ರೂಪಿಸಿದೆ. ಅದರಂತೆ ಬರೋಬ್ಬರಿ 70 ಸಾವಿರ ಕೊಹ್ಲಿಯ ಮುಖವಾಡಗಳನ್ನು ವಿತರಿಸಲು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಮುಂದಾಗಿದೆ. ಇದರಿಂದ ಬಹುತೇಕ ಸ್ಟೇಡಿಯಂ ಕೊಹ್ಲಿಯ ಮಾಸ್ಕ್ನಿಂದ ಕೂಡಿರಲಿದೆ.