
ಡಿಸೆಂಬರ್ 24 ರಿಂದ ಶುರುವಾಗಲಿರುವ ವಿಜಯ ಹಝಾರೆ ಟೂರ್ನಿಗಾಗಿ ಮುಂಬೈ ಹಾಗೂ ದೆಹಲಿ ತಂಡಗಳನ್ನು ಪ್ರಕಟಿಸಲಾಗಿದೆ. ಈ ಎರಡು ತಂಡಗಳಲ್ಲಿ ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಂಡಿರುವುದು ವಿಶೇಷ.

ವಿರಾಟ್ ಕೊಹ್ಲಿ ದೆಹಲಿ ತಂಡದಲ್ಲಿದ್ದರೆ, ರೋಹಿತ್ ಶರ್ಮಾ ಮುಂಬೈ ಪರ ಕಣಕ್ಕಿಳಿಯಲಿದ್ದಾರೆ. ಇಲ್ಲಿ ದೆಹಲಿ ತಂಡದ ನಾಯಕನಾಗಿ ರಿಷಭ್ ಪಂತ್ ಕಾಣಿಸಿಕೊಳ್ಳಲಿದ್ದಾರೆ. ಅತ್ತ ಹಿಟ್ಮ್ಯಾನ್ನ ಒಳಗೊಂಡಿರುವ ಮುಂಬೈ ತಂಡವನ್ನು ಮುನ್ನಡೆಸಲಿರುವುದು ಶಾರ್ದೂಲ್ ಠಾಕೂರ್ ಎಂಬುದು ವಿಶೇಷ.

ಇನ್ನು ವಿರಾಟ್ ಕೊಹ್ಲಿ ಕೊನೆಯ ಬಾರಿ ವಿಜಯ ಹಝಾರೆ ಟೂರ್ನಿ ಆಡಿದ್ದು 2010 ರಲ್ಲಿ. ಅಂದು ದೆಹಲಿ ಪರ ಐದು ಮ್ಯಾಚ್ಗಳಲ್ಲಿ ಬ್ಯಾಟ್ ಬೀಸಿದ್ದ ಕೊಹ್ಲಿ 45.80 ಸರಾಸರಿಯಲ್ಲಿ 229 ರನ್ ಗಳಿಸಿದ್ದರು. ಈ ವೇಳೆ ಎರಡು ಅರ್ಧಶತಕಗಳನ್ನು ಸಹ ಬಾರಿಸಿದ್ದರು.

ರೋಹಿತ್ ಶರ್ಮಾ ವಿಜಯ ಹಝಾರೆ ಟೂರ್ನಿಯಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದು 2019 ರಲ್ಲಿ. ಮುಂಬೈ ಪರ ಎರಡು ಮ್ಯಾಚ್ಗಳಲ್ಲಿ ಕಣಕ್ಕಿಳಿದಿದ್ದ ಹಿಟ್ಮ್ಯಾನ್ ಒಟ್ಟು 50 ರನ್ ಕಲೆಹಾಕಿದ್ದರು. ಇದಾದ ಬಳಿಕ ದೇಶೀಯ ಏಕದಿನ ಟೂರ್ನಿಯಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಂಡಿರಲಿಲ್ಲ.

ಇದೀಗ ವಿರಾಟ್ ಕೊಹ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ಹಾಗೂ ರೋಹಿತ್ ಶರ್ಮಾ 7 ವರ್ಷಗಳ ನಂತರ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇಬ್ಬರು ದಿಗ್ಗಜರು 2 ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದು, ಇದಾದ ಬಳಿಕ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯ ಹಝಾರೆ ಟೂರ್ನಿಗೆ ದೆಹಲಿ ತಂಡ: ರಿಷಭ್ ಪಂತ್, ವಿರಾಟ್ ಕೊಹ್ಲಿ (ಎರಡು ಪಂದ್ಯಗಳಿಗೆ), ಇಶಾಂತ್ ಶರ್ಮಾ, ನವದೀಪ್ ಸೈನಿ, ಆಯುಷ್ ಬದೋನಿ, ಅರ್ಪಿತ್ ರಾಣಾ, ಯಶ್ ಧುಲ್, ಸಾರ್ಥಕ್ ರಂಜನ್, ಪ್ರಿಯಾಂಶ್ ಆರ್ಯ, ತೇಜಸ್ವಿ ದಹಿಯಾ, ನಿತೀಶ್ ರಾಣಾ, ಹೃತಿಕ್ ಶೋಕೀನ್, ಹರ್ಷ್ ತ್ಯಾಗಿ, ಸಿಮರ್ಜೀತ್ ಸಿಂಗ್, ಪ್ರಿನ್ಸ್ ಯಾದವ್, ದಿವಿಜ್ ಮೆಹ್ರ, ಆಯುಷ್ ದೋಸೆಜ, ವೈಭವ್ ಕಡ್ಪಲ್, ರೋಹನ್ ರಾಣಾ, ಅನೂಜ್ ರಾವತ್ (ಮೀಸಲು ಆಟಗಾರ).

ವಿಜಯ ಹಝಾರೆ ಟೂರ್ನಿಗೆ ಮುಂಬೈ ತಂಡ: ರೋಹಿತ್ ಶರ್ಮಾ (ಎರಡು ಪಂದ್ಯಗಳಿಗೆ), ಶಾರ್ದೂಲ್ ಠಾಕೂರ್ (ನಾಯಕ), ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಇಶಾನ್ ಮುಲ್ಚಂದಾನಿ, ಶಮ್ಸ್ ಮುಲಾನಿ, ಮುಶೀರ್ ಖಾನ್, ತನುಷ್ ಕೋಟ್ಯಾನ್, ಅಂಗ್‌ಕ್ರಿಶ್ ರಘುವಂಶಿ, ತುಷಾರ್ ದೇಶಪಾಂಡೆ, ಸರ್ಫರಾಝ್ ಖಾನ್, ಓಂಕಾರ್ ತರ್ಮಲೆ, ಸಿದ್ದೇಶ್ ಲಾಡ್, ಸಿಲ್ವಸ್ಟರ್ ಡಿಸೋಝ, ಚಿನ್ಮಯ್ ಸುತಾರೆ, ಸಾಯಿರಾಜ್ ಪಾಟೀಲ್, ಆಕಾಶ್ ಆನಂದ್ (ವಿಕೆಟ್ ಕೀಪರ್), ಸೂರ್ಯನಾಶ್ ಶೆಡ್ಗೆ.