
ಮಿಥಾಲಿ ರಾಜ್ ಬೆನ್ನಲ್ಲೇ ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ, ಆಲ್ ರೌಂಡರ್ ರುಮೇಲಿ ಧರ್ ಎಲ್ಲ ಮಾದರಿಯ ಕ್ರಿಕೆಟಿಗೆ ದಿಢೀರ್ ವಿದಾಯ ಘೋಷಿಸಿದ್ದಾರೆ.

ಬಲಗೈ ದಾಂಡಿಗ ಮತ್ತು ಮಧ್ಯಮ ವೇಗಿಯಾಗಿದ್ದ ರುಮೇಲಿ ಧರ್ ತನ್ನ ಈ ನಿರ್ಧಾರವನ್ನು ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಬಹಿರಂಗಪಡಿಸಿದರು.

2003ರಲ್ಲಿ ಇಂಗ್ಲೆಂಡ್ ವಿರುದ್ಧ ಅಂತರರಾಷ್ಟ್ರಿಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದು, 2018 ರವರೆಗೂ 4 ಟೆಸ್ಟ್, 78 ಏಕದಿನ ಮತ್ತು 18 ಟಿ20 ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2012ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿ ಆಲ್ರೌಂಡರ್ ಆಟಗಾರ್ತಿ ಎಂಬುದನ್ನು ಸಾಬೀತು ಮಾಡಿದ್ದರು.

6 ವರ್ಷಗಳ ಸುದೀರ್ಘ ವಿರಾಮದ ಬಳಿಕ 2018 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟಿಗೆ ಪುನರಾಗಮನ ಮಾಡಿ ಸುದ್ದಿಯಾಗಿದ್ದರು. ಅಂದು ಗಾಯಾಳು ಜೂಲನ್ ಗೋಸ್ವಾಮಿ ಬದಲು ಭಾರತ ತಂಡವನ್ನು ಪ್ರವೇಶಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದರು. 2005ರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಫೈನಲ್ ತಲುಪುವಲ್ಲಿ ರುಮೇಲಿ ಧರ್ ವಹಿಸಿದ ಪಾತ್ರ ಅಮೋಘವಾಗಿತ್ತು.

"ಪುನರಾವರ್ತಿತ ಗಾಯದ ಸಮಸ್ಯೆಯಿಂದ ಕ್ರಿಕೆಟ್ ಮುಂದುವರಿಸಲು ಸಾಧ್ಯವಾಗದ ಕಾರಣ 15 ವರ್ಷಗಳ ಕ್ರಿಕೆಟ್ ಬದುಕಿನಿಂದ ಹಿಂದೆ ಸರಿಯುತ್ತಿದ್ದೇನೆ. ನನ್ನ ವೃತ್ತಿಯಲ್ಲಿ ಸಹಕರಿಸಿದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು" ಎಂದು ರುಮೇಲಿ ತಮ್ಮ ಅಧಿಕೃತ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.