
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಇತಿಹಾಸವನ್ನು ನಿರ್ಮಿಸಿರುವುದು ಭಾರತೀಯ ಬ್ಯಾಟರ್ ರುತುರಾಜ್ ಗಾಯಕ್ವಾಡ್ (Ruturaj gaikwad). ಅದು ಕೂಡ ಆಸ್ಟ್ರೇಲಿಯಾ ದಾಂಡಿಗನ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ವಿಜಯ ಹಝಾರೆ ಟೂರ್ನಿಯಲ್ಲಿ ಗೋವಾ ವಿರುದ್ಧದ ಪಂದ್ಯದಲ್ಲಿ ಮಹಾರಾಷ್ಟ್ರ ಪರ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ 131 ಎಸೆತಗಳಲ್ಲಿ 134 ರನ್ ಬಾರಿಸಿದ್ದರು. ಈ ಶತಕದೊಂದಿಗೆ ರುತುರಾಜ್ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿರುವ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಮೈಕೆಲ್ ಬೆವೆನ್ ಹೆಸರಿನಲ್ಲಿತ್ತು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 385 ಇನಿಂಗ್ಸ್ ಆಡಿರುವ ಮೈಕೆಲ್ ಬೆವೆನ್ 57.86 ಸರಾಸರಿಯಲ್ಲಿ ಒಟ್ಟು 15103 ರನ್ ಕಲೆಹಾಕಿದ್ದಾರೆ. ಈ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಧಿಕ ಅವರೇಜ್ ಹೊಂದಿರುವ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ಈ ವಿಶ್ವ ದಾಖಲೆಯನ್ನು ಮುರಿಯುವಲ್ಲಿ ರುತುರಾಜ್ ಗಾಯಕ್ವಾಡ್ ಯಶಸ್ವಿಯಾಗಿದ್ದಾರೆ. ಈ ವರೆಗೆ ಏಕದಿನ ಮಾದರಿಯಲ್ಲಿ ಒಟ್ಟು 95 ಇನಿಂಗ್ಸ್ ಆಡಿರುವ ರುತುರಾಜ್ ಗಾಯಕ್ವಾಡ್ 58.83 ಸರಾಸರಿಯಲ್ಲಿ 5060 ರನ್ ಗಳಿಸಿದ್ದಾರೆ. ಈ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸರಾಸರಿ ಹೊಂದಿರುವ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆಯೇ ಏಕದಿನ ಸ್ವರೂಪದಲ್ಲಿ ಅತೀ ಕಡಿಮೆ ಇನಿಂಗ್ಸ್ ಗಳ ಮೂಲಕ 5000 ರನ್ ಕಲೆಹಾಕಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ರುತುರಾಜ್ ಗಾಯಕ್ವಾಡ್ ತಮ್ಮ ಹೆಸರಿಗೆ ಸೇರ್ಪಡೆಗೊಳಿಸಿದ್ದಾರೆ. ಈ ಸಾಧನೆಗಳ ಹೊರತಾಗಿಯೂ ರುತುರಾಜ್ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿಲ್ಲ ಎಂಬುದೇ ಅಚ್ಚರಿ.