ಒಂದೇ ಒಂದು ಎಸೆತದಿಂದ ಭರ್ಜರಿ ದಾಖಲೆ ತಪ್ಪಿಸಿಕೊಂಡ ಲಾರೆನ್ ಬೆಲ್
Lauren Bell Records: ಇಂಗ್ಲೆಂಡ್ ತಂಡದ ವೇಗದ ಬೌಲರ್ ಲಾರೆನ್ ಬೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪಾದಾರ್ಪಣೆ ಮಾಡಿದ್ದಾರೆ. ಪಾದಾರ್ಪಣೆ ಪಂದ್ಯದಲ್ಲೇ ಮಾರಕ ದಾಳಿ ಸಂಘಟಿಸುವ ಮೂಲಕ ಲಾರೆನ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆದರೆ ಕೇವಲ ಒಂದು ಎಸೆತದಿಂದಾಗಿ ಶಬ್ನಿಮ್ ಇಸ್ಮಾಯಿಲ್ ಹೆಸರಿನಲ್ಲಿರುವ ದಾಖಲೆ ಮುರಿಯುವಲ್ಲಿ ವಿಫಲರಾಗಿದ್ದಾರೆ.
Updated on: Jan 10, 2026 | 10:55 AM

ಇಂಗ್ಲೆಂಡ್ ವೇಗಿ ಲಾರೆನ್ (Lauren Bell) ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಅದು ಸಹ ರಾಯಲ್ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ.

ಈ ಹಿಂದೆ ಯುಪಿ ವಾರಿಯರ್ಸ್ ಪರ ಕಣಕ್ಕಿಳಿದಿದ್ದ ಲಾರೆನ್ ಬೆಲ್ ಆರ್ಸಿಬಿ ಪರ ಆಡಿದ ಚೊಚ್ಚಲ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಮೊದಲ ಓವರ್ ಮೇಡನ್ ಮಾಡುವ ಮೂಲಕ. ಅಂದರೆ ವುಮೆನ್ಸ್ ಪ್ರೀಮಿಯರ್ ಲೀಗ್ 2026 ಅನ್ನು ಬೆಲ್ ಮೇಡನ್ ಓವರ್ನೊಂದಿಗೆ ಆರಂಭಿಸಿದ್ದಾರೆ.

ಅಷ್ಟೇ ಅಲ್ಲದೆ ಬೆಲ್ 2ನೇ ಓವರ್ನಲ್ಲಿ ನೀಡಿದ್ದು ಕೇವಲ ಒಂದು ರನ್ ಮಾತ್ರ. ಇನ್ನು ತನ್ನ ಮೂರನೇ ಓವರ್ನಲ್ಲಿ 6 ರನ್ ನೀಡಿದ್ದರು. ಹಾಗೆಯೇ ಕೊನೆಯ ಓವರ್ನಲ್ಲಿ ಕೇವಲ 7 ರನ್ ಮಾತ್ರ ಬಿಟ್ಟು ಕೊಟ್ಟಿದ್ದರು. ಈ ಮೂಲಕ 4 ಓವರ್ಗಳಲ್ಲಿ ಕೇವಲ 14 ರನ್ ನೀಡಿ 1 ವಿಕೆಟ್ ಪಡೆದಿದ್ದರು.

ವಿಶೇಷ ಎಂದರೆ ಲಾರೆನ್ ಬೆಲ್ 24 ಎಸೆತಗಳಲ್ಲಿ 19 ಎಸೆತಗಳನ್ನು ಡಾಟ್ ಮಾಡಿದ್ದರು. ಅಂದರೆ 19 ಎಸೆತಗಳಲ್ಲಿ ಯಾವುದೇ ರನ್ ನೀಡಿರಲಿಲ್ಲ. ಆದರೆ ಉಳಿದ 6 ಎಸೆತಗಳಲ್ಲಿ ರನ್ ನೀಡುವ ಮೂಲಕ ಭರ್ಜರಿ ದಾಖಲೆಯೊಂದನ್ನು ತಪ್ಪಿಸಿಕೊಂಡರು. ಅದರಲ್ಲೂ ಒಂದೇ ಒಂದು ಎಸೆತವನ್ನು ಡಾಟ್ ಮಾಡಿದ್ರೆ ಲಾರೆನ್ ಹೆಸರಿಗೆ ದಾಖಲೆಯೊಂದು ಸೇರ್ಪಡೆಯಾಗುತ್ತಿತ್ತು.

ಹೌದು, ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 4 ಓವರ್ಗಳನ್ನು ಎಸೆದು ಅತ್ಯಧಿಕ ಡಾಟ್ ಬಾಲ್ ಮಾಡಿದ ಭರ್ಜರಿ ದಾಖಲೆ ಮುಂಬೈ ಇಂಡಿಯನ್ಸ್ ತಂಡದ ವೇಗಿ ಶಬ್ನಿನ್ ಇಸ್ಮಾಯಿಲ್ ಹೆಸರಿನಲ್ಲಿದೆ. 2025 ರಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಶಬ್ನಿಮ್ 4 ಓವರ್ಗಳಲ್ಲಿ 20 ಡಾಟ್ ಬಾಲ್ ಎಸೆದಿದ್ದರು.

ಈ ಭರ್ಜರಿ ದಾಖಲೆ ಮುರಿಯುವ ಅವಕಾಶ ಲಾರೆನ್ ಬೆಲ್ಗಿತ್ತು. ಆದರೆ ತನ್ನ ಕೊನೆಯ ಓವರ್ನ ಅಂತಿಮ 4 ಎಸೆತಗಳಲ್ಲಿ ರನ್ ನೀಡುವ ಮೂಲಕ ಬೆಲ್ ಡಾಟ್ ಬಾಲ್ ದಾಖಲೆ ಬರೆಯುವ ಅವಕಾಶವನ್ನು ಕೈಚೆಲ್ಲಿಕೊಂಡರು. ಇದಾಗ್ಯೂ ಆರ್ಸಿಬಿ ಪರ ಒಂದು ಪಂದ್ಯದಲ್ಲಿ ಅತ್ಯಧಿಕ ಡಾಟ್ ಬಾಲ್ ಎಸೆದ ಬೌಲರ್ ಎಂಬ ದಾಖಲೆ ಲಾರೆನ್ ಬೆಲ್ ಪಾಲಾಗಿದೆ.
