ಭಾರತ ಮತ್ತು ಸೌತ್ ಆಫ್ರಿಕಾ (IND vs SA) ನಡುವಣ 2ನೇ ಟೆಸ್ಟ್ ಪಂದ್ಯವು ಇಂದಿನಿಂದ ಆರಂಭವಾಗಲಿದೆ. ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾಗೆ ಹೊಸ ಇತಿಹಾಸ ಬರೆಯುವ ಅವಕಾಶವಿದೆ.
ಏಕೆಂದರೆ 2 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ಇನಿಂಗ್ಸ್ ಹಾಗೂ 32 ರನ್ಗಳ ಭರ್ಜರಿ ಜಯ ಸಾಧಿಸಿತು. ಇದೀಗ ಸರಣಿ ಗೆಲ್ಲಬೇಕಿದ್ದರೆ ಸೌತ್ ಆಫ್ರಿಕಾ 2ನೇ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಸಾಕು. ಆದರೆ ಅತ್ತ ಟೀಮ್ ಇಂಡಿಯಾ ಗೆದ್ದರೆ ಮಾತ್ರ ಸರಣಿಯನ್ನು ಡ್ರಾ ಮಾಡಿಕೊಳ್ಳಬಹುದು.
ಒಂದು ವೇಳೆ ಕೇಪ್ಟೌನ್ನಲ್ಲಿ ಭಾರತ ತಂಡವು ಗೆಲುವು ದಾಖಲಿಸಿದರೆ ಹೊಸ ಇತಿಹಾಸವಂತು ನಿರ್ಮಾಣವಾಗಲಿದೆ. ಅದು ಕೂಡ ರೋಹಿತ್ ಶರ್ಮಾ ಹೆಸರಿನಲ್ಲಿ ಎಂಬುದು ವಿಶೇಷ. ಅಂದರೆ ಭಾರತ ತಂಡವು ಸೌತ್ ಆಫ್ರಿಕಾದಲ್ಲಿ 9 ಟೆಸ್ಟ್ ಸರಣಿಗಳನ್ನು ಆಡಿದೆ.
ಈ ವೇಳೆ ಒಮ್ಮೆಯೂ ಭಾರತ ತಂಡ ಟೆಸ್ಟ್ ಸರಣಿ ಗೆದ್ದಿಲ್ಲ ಎಂಬುದೇ ಅಚ್ಚರಿ. ಇದಾಗ್ಯೂ 2010-11ರಲ್ಲಿ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಂದು ಸರಣಿಯನ್ನು 1-1 ಅಂತರದಿಂದ ಡ್ರಾನಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಈ ಸರಣಿಯೊಂದನ್ನು ಹೊರತುಪಡಿಸಿದರೆ ಉಳಿದ 8 ಸರಣಿಗಳಲ್ಲೂ ಟೀಮ್ ಇಂಡಿಯಾ ಪರಾಜಯಗೊಂಡಿದೆ.
ಇದೀಗ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ ಸರಣಿ 1-1 ಅಂತರದಿಂದ ಡ್ರಾ ಆಗಲಿದೆ. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಬಳಿಕ ಸೌತ್ ಆಫ್ರಿಕಾದಲ್ಲಿ ಸರಣಿ ಡ್ರಾ ಮಾಡಿಕೊಂಡ 2ನೇ ನಾಯಕ ಎನಿಸಿಕೊಳ್ಳಲು ರೋಹಿತ್ ಶರ್ಮಾಗೆ ಉತ್ತಮ ಅವಕಾಶವಿದೆ. ಅದರಂತೆ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಟೀಮ್ ಇಂಡಿಯಾ ಹೊಸ ಇತಿಹಾಸ ಬರೆಯಲಿದೆಯಾ ಕಾದು ನೋಡಬೇಕಿದೆ.