
ಸೆಂಚುರಿಯನ್ನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಬೌಲರ್ ಕಾರ್ಬಿನ್ ಬಾಷ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆದರೆ ಈ ವರ್ಲ್ಡ್ ರೆಕಾರ್ಡ್ ನಿರ್ಮಾಣವಾಗಿರುವುದು ಬ್ಯಾಟಿಂಗ್ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡವು ಕಮ್ರಾನ್ ಗುಲಾಮ್ (54) ಅವರ ಅರ್ಧಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 211 ರನ್ಗಳಿಸಿ ಆಲೌಟ್ ಆಗಿದೆ. ಸೌತ್ ಆಫ್ರಿಕಾ ಪರ ಡೇನ್ ಪ್ಯಾಟರ್ಸನ್ 5 ವಿಕೆಟ್ ಪಡೆದರೆ, ಕಾರ್ಬಿನ್ ಬಾಷ್ 4 ವಿಕೆಟ್ ಕಬಳಿಸಿದರು.

ಇದಾದ ಬಳಿಕ ಪ್ರಥಮ ಇನಿಂಗ್ಸ್ ಶುರು ಮಾಡಿದ ಸೌತ್ ಆಫ್ರಿಕಾ ತಂಡಕ್ಕೆ ಐಡೆನ್ ಮಾರ್ಕ್ರಾಮ್ (89) ಉತ್ತಮ ಆರಂಭ ಒದಗಿಸಿದ್ದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಸೌತ್ ಆಫ್ರಿಕಾ ತಂಡವು 191 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಾರ್ಬಿನ್ ಬಾಷ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಪಾಕ್ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿದ ಬಾಷ್ ಬರೋಬ್ಬರಿ 15 ಫೋರ್ಗಳನ್ನು ಸಿಡಿಸಿದರು. ಅಲ್ಲದೆ 93 ಎಸೆತಗಳಲ್ಲಿ ಅಜೇಯ 81 ರನ್ ಬಾರಿಸಿದರು.

ಈ 81 ರನ್ಗಳೊಂದಿಗೆ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಕಾರ್ಬಿನ್ ಬಾಷ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಮಿಲನ್ ರತ್ನಾಯಕೆ ಹೆಸರಿನಲ್ಲಿತ್ತು.

2024 ರಲ್ಲಿ ಮ್ಯಾಚೆಂಸ್ಟರ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದ್ದ ಮಿಲನ್ ರತ್ನಾಯಕೆ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 135 ಎಸೆತಗಳಲ್ಲಿ 72 ರನ್ ಬಾರಿಸಿದ್ದರು. ಈ ಮೂಲಕ ಶ್ರೀಲಂಕಾ ಬೌಲರ್ ಚೊಚ್ಚಲ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಕಾರ್ಬಿನ್ ಬಾಷ್ ಯಶಸ್ವಿಯಾಗಿದ್ದಾರೆ. ಸೆಂಚುರಿಯನ್ನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿರುವ ಬಾಷ್ ಮೊದಲ ಮ್ಯಾಚ್ನಲ್ಲೇ ಅಜೇಯ 81 ರನ್ ಸಿಡಿಸಿದ್ದಾರೆ. ಈ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಚೊಚ್ಚಲ ಪಂದ್ಯದಲ್ಲಿ 4 ವಿಕೆಟ್ಗಳೊಂದಿಗೆ ಅರ್ಧಶತಕ ಬಾರಿಸಿದ ಸೌತ್ ಆಫ್ರಿಕಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಕಾರ್ಬಿನ್ ಬಾಷ್ ಪಾತ್ರರಾಗಿದ್ದಾರೆ. ಈ ಮೂಲಕ ಮೊದಲ ಪಂದ್ಯದಲ್ಲೇ ಬಾಷ್ ಎರಡು ಭರ್ಜರಿ ದಾಖಲೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.