ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 50 ಓವರ್ಗಳಲ್ಲಿ 325 ರನ್ಗಳಿಸಿ ಆಲೌಟ್ ಆಗಿತ್ತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಪರ ನಾಯಕ ಶಾಯ್ ಹೋಪ್ (109) ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಪರಿಣಾಮ 48.5 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ವೆಸ್ಟ್ ಇಂಡೀಸ್ ತಂಡವು 326 ರನ್ಗಳಿಸಿ 4 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು.
ಇತ್ತ ವೆಸ್ಟ್ ಇಂಡೀಸ್ ಬ್ಯಾಟರ್ಗಳು ಅಬ್ಬರಿಸಿದರೆ, ಅತ್ತ ಇಂಗ್ಲೆಂಡ್ ಪರ ಸ್ಯಾಮ್ ಕರನ್ ದುಬಾರಿಯಾಗಿ ಪರಿಣಮಿಸಿದರು. 9.5 ಓವರ್ಗಳನ್ನು ಎಸೆದಿದ್ದ ಕರನ್ 98 ರನ್ ನೀಡುವ ಮೂಲಕ ಕಳಪೆ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡರು.
ಅಂದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇಂಗ್ಲೆಂಡ್ ಪರ ಅತ್ಯಧಿಕ ರನ್ ನೀಡಿದ ಬೌಲರ್ ಎಂಬ ಕಳಪೆ ದಾಖಲೆ ಇದೀಗ ಸ್ಯಾಮ್ ಕರನ್ ಪಾಲಾಗಿದೆ. ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಸ್ಟೀವ್ ಹಾರ್ಮಿಸನ್ ಹೆಸರಿನಲ್ಲಿತ್ತು.
2006 ರಲ್ಲಿ ಲೀಡ್ಸ್ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸ್ಟೀವ್ ಹಾರ್ಮಿಸನ್ 10 ಓವರ್ಗಳಲ್ಲಿ 97 ರನ್ ನೀಡಿದ್ದರು. ಇದೀಗ 9.5 ಓವರ್ಗಳಲ್ಲಿ 98 ರನ್ ನೀಡುವ ಮೂಲಕ ಸ್ಯಾಮ್ ಕರನ್ ಕಳಪೆ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.