Updated on: Dec 04, 2023 | 11:09 PM
IPL 2024: ಐಪಿಎಲ್ ಸೀಸನ್ 17 ಆರಂಭಕ್ಕೂ ಮುನ್ನವೇ ಮಹೇಂದ್ರ ಸಿಂಗ್ ಧೋನಿ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಯಾರಾಗುತ್ತಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಕುತೂಹಲಕಾರಿ ಪ್ರಶ್ನೆಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ದೀಪ್ ದಾಸ್ ಗುಪ್ತ ಉತ್ತರ ನೀಡಿದ್ದಾರೆ.
ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಈಗ 42 ವರ್ಷ. ಹೀಗಾಗಿ ಅವರು ಶೀಘ್ರದಲ್ಲೇ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ. ಆದರೆ ಅವರ ಬಳಿಕ ಸಿಎಸ್ಕೆ ತಂಡ ಉತ್ತರಾಧಿಕಾರಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ದೀಪ್ ದಾಸ್ ಗುಪ್ತ ನೀಡಿದ ಉತ್ತರ- ರಿಷಭ್ ಪಂತ್.
ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ಮುನ್ನಡೆಸುವುದರಲ್ಲಿ ಅನುಮಾನವೇ ಇಲ್ಲ. ಆದರೆ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರಿಷಭ್ ಪಂತ್ ಅವರಿಗೆ ಮಣೆಹಾಕುವ ಸಾಧ್ಯತೆಯಿದೆ.
ಇಲ್ಲಿ ರಿಷಭ್ ಪಂತ್ ಮಹೇಂದ್ರ ಸಿಂಗ್ ಧೋನಿಗೆ ತುಂಬಾ ಆಪ್ತರು. ಹೀಗಾಗಿ ಯುವ ವಿಕೆಟ್ ಕೀಪರ್ ಅನ್ನು ಸಿಎಸ್ಕೆ ಸೆಳೆಯುವುದರಲ್ಲಿ ಅನುಮಾನವಿಲ್ಲ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ರಿಷಭ್ ಪಂತ್ಗೆ ನಾಯಕನ ಪಟ್ಟ ಕಟ್ಟಬಹುದು ಎಂದು ದೀಪ್ ದಾಸ್ ಗುಪ್ತ ಅಭಿಪ್ರಾಯಪಟ್ಟಿದ್ದಾರೆ.
2022 ರಲ್ಲಿ ಕಾರು ಅಪಘಾತದಿಂದ ಗಾಯಗೊಂಡಿದ್ದ ರಿಷಭ್ ಪಂತ್ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಈ ಬಾರಿಯ ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುವ ಸೂಚನೆ ನೀಡಿದ್ದಾರೆ. ಹೀಗಾಗಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ.