
ಬ್ಯಾಕ್ ಟು ಬ್ಯಾಕ್ ಸೆಂಚುರಿ... ಬ್ಯಾಕ್ ಟು ಬ್ಯಾಕ್ ಸೊನ್ನೆ... ಸಂಜು ಸ್ಯಾಮ್ಸನ್ ಸತತ ಎರಡು ಶತಕಗಳನ್ನು ಬಾರಿಸಿದ ಬಳಿಕ ಸತತ ಎರಡು ಇನಿಂಗ್ಸ್ಗಳಲ್ಲಿ ಸೊನ್ನೆ ಸುತ್ತಿದ್ದರು. ಅತ್ತ ಬ್ಯಾಕ್ ಟು ಬ್ಯಾಕ್ ಸೆಂಚುರಿಗಳೊಂದಿಗೆ ದಾಖಲೆ ಬರೆದ ಸ್ಯಾಮ್ಸನ್ ಸೊನ್ನೆ ಸುತ್ತಿ ಅನಗತ್ಯದ ರೆಕಾರ್ಡ್ಗೂ ಕೊರೊಳೊಡ್ಡಿದ್ದರು.

ಆದರೀಗ ಜೋಹಾನ್ಸ್ಬರ್ಗ್ನ ವಾಂಡರರ್ಸ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಮತ್ತೊಂದು ಸೆಂಚುರಿ ಸಿಡಿಸುವ ಮೂಲಕ ಸಂಜು ಸ್ಯಾಮ್ಸನ್ ಈ ವರ್ಷ ಅಪರೂಪದ ಹಾಗೂ ಅನಗತ್ಯದ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಂದರೆ ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಒಂದೇ ವರ್ಷ ಅತ್ಯಧಿಕ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ಸಂಜು ಸ್ಯಾಮ್ಸನ್ ಪಾಲಾಗಿದೆ. ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ 111 ರನ್ ಬಾರಿಸಿದ್ದ ಸ್ಯಾಮ್ಸನ್, ಸೌತ್ ಆಫ್ರಿಕಾ ವಿರುದ್ಧ 107 ಮತ್ತು 109 ರನ್ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಒಂದೇ ವರ್ಷ 3 ಟಿ20 ಶತಕ ಸಿಡಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.

ಇನ್ನು ಸೌತ್ ಆಫ್ರಿಕಾ ವಿರುದ್ಧ 2ನೇ ಮತ್ತು 3ನೇ ಟಿ20 ಪಂದ್ಯಗಳಲ್ಲಿ ಸೊನ್ನೆ ಸುತ್ತುವ ಮೂಲಕ ಒಂದೇ ವರ್ಷದಲ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಸೊನ್ನೆಗೆ ಔಟಾದ ಭಾರತೀಯ ಬ್ಯಾಟರ್ ಎಂಬ ಕಳಪೆ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ವರ್ಷ ಸ್ಯಾಮ್ಸನ್ ಒಟ್ಟು 5 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

ಅಂದರೆ ಒಂದೆಡೆ ಮೂರು ಸೆಂಚುರಿಗಳೊಂದಿಗೆ ಒಂದೇ ವರ್ಷ ಅತ್ಯಧಿಕ ಶತಕ ಸಿಡಿಸಿದ ಭರ್ಜರಿ ದಾಖಲೆ ಬರೆದಿರುವ ಸಂಜು ಸ್ಯಾಮ್ಸನ್, ಮತ್ತೊಂದೆಡೆ ಸೊನ್ನೆ ಸುತ್ತುವ ಮೂಲಕ ಒಂದೇ ವರ್ಷ ಅತೀ ಹೆಚ್ಚು ಬಾರಿ ಸೊನ್ನೆ ಸುತ್ತಿದ ಅನಗತ್ಯದ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಈ ಮೂಲಕ ಒಂದೇ ವರ್ಷ ಅತ್ಯಂತ ಕಳಪೆ ಹಾಗೂ ಭರ್ಜರಿ ದಾಖಲೆಗಳನ್ನು ಸಂಜು ಸ್ಯಾಮ್ಸನ್ ತಮ್ಮದಾಗಿಸಿಕೊಂಡಿರುವುದು ವಿಶೇಷ.