ನಿವೃತ್ತಿ ಘೋಷಿಸಿದ ನ್ಯೂಝಿಲೆಂಡ್ನ ಸ್ಟಾರ್ ಆಟಗಾರ
New Zealand vs England: ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 28 ರಿಂದ ಶುರುವಾಗಲಿದೆ. ಈ ಸರಣಿಯ ಎರಡನೇ ಪಂದ್ಯದ ಮೂಲಕ 35 ವರ್ಷದ ಕಿವೀಸ್ ವೇಗಿ ಟಿಮ್ ಸೌಥಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ.
Updated on: Nov 16, 2024 | 10:23 AM

ನ್ಯೂಝಿಲೆಂಡ್ ತಂಡದ ಖ್ಯಾತ ಆಟಗಾರ ಟಿಮ್ ಸೌಥಿ (Tim Southee) ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ದೀರ್ಘಾವಧಿಯ ಕ್ರಿಕೆಟ್ಗೆ ವಿದಾಯ ಹೇಳುವುದಾಗಿ ಸೌಥಿ ತಿಳಿಸಿದ್ದಾರೆ.

ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಡಿಸೆಂಬರ್ 6 ರಿಂದ ಶುರುವಾಗಲಿದೆ. ಈ ಪಂದ್ಯವು ಹ್ಯಾಮಿಲ್ಟನ್ನ ಸೆಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ. ತಮ್ಮ ತವರು ಮೈದಾನದಲ್ಲಿ ನಡೆಯಲಿರುವ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲು ಟಿಮ್ ಸೌಥಿ ನಿರ್ಧರಿಸಿದ್ದು, ಅದರಂತೆ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯವು ನ್ಯೂಝಿಲೆಂಡ್ ವೇಗಿಯ ಪಾಲಿಗೆ ಕೊನೆಯ ಪಂದ್ಯವಾಗಿರಲಿದೆ.

ಟಿಮ್ ಸೌಥಿ ನ್ಯೂಝಿಲೆಂಡ್ ಪರ ಈವರೆಗೆ 104 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 197 ಇನಿಂಗ್ಸ್ಗಳಲ್ಲಿ 23082 ಎಸೆತಗಳನ್ನು ಎಸೆದಿರುವ ಅವರು ಒಟ್ಟು 385 ವಿಕೆಟ್ ಕಬಳಿಸಿದ್ದಾರೆ. ಇದೀಗ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸಿದರೆ 400 ವಿಕೆಟ್ ಸಾಧನೆ ಮಾಡಬಹುದು.

ಅಲ್ಲದೆ ಈ ಸಾಧನೆ ಮಾಡಿದ ನ್ಯೂಝಿಲೆಂಡ್ನ 2ನೇ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಬಹುದು. ಈ ಪಟ್ಟಿಯಲ್ಲಿ ಸರ್ ರಿಚರ್ಡ್ ಹ್ಯಾಡ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಿವೀಸ್ ಪರ 86 ಟೆಸ್ಟ್ ಪಂದ್ಯಗಳನ್ನಾಡಿರುವ ಹ್ಯಾಡ್ಲಿ 431 ವಿಕೆಟ್ ಕಬಳಿಸಿ ಟೆಸ್ಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ನ್ಯೂಝಿಲೆಂಡ್ ಬೌಲರ್ ಎನಿಸಿಕೊಂಡಿದ್ದಾರೆ.

ಇದೀಗ ನಿವೃತ್ತಿಯ ಹಂಚಿನಲ್ಲಿರುವ ಟಿಮ್ ಸೌಥಿ ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಮೂಲಕ 400 ವಿಕೆಟ್ಗಳ ಸಾಧಕರ ಪಟ್ಟಿಗೆ ಸೇರ್ಪಡೆಯಾಗುವ ಅವಕಾಶ ಹೊಂದಿದ್ದಾರೆ. ಈ ವಿಶೇಷ ಸಾಧನೆಯೊಂದಿಗೆ ಕಿವೀಸ್ ವೇಗಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರಾ ಕಾದು ನೋಡಬೇಕಿದೆ.
