IND vs SA: ವರ್ಷದಲ್ಲಿ ಅಧಿಕ ಸೊನ್ನೆ ಸುತ್ತಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸಂಜು ಸ್ಯಾಮ್ಸನ್
Sanju Samson's Duck: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಸತತ 2 ಪಂದ್ಯಗಳಲ್ಲಿ ಡಕ್ ಆಗಿ ಔಟ್ ಆಗುವ ಮೂಲಕ ಬೇಡದ ದಾಖಲೆ ನಿರ್ಮಿಸಿದ್ದಾರೆ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು, ಈಗ ವರ್ಷದಲ್ಲಿ 5 ಬಾರಿ ಶೂನ್ಯಕ್ಕೆ ಔಟ್ ಆದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅಲ್ಲದೆ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಭಾರತೀಯ ವಿಕೆಟ್ ಕೀಪರ್ ಎಂಬ ಬೇಡದ ದಾಖಲೆಗೂ ಸಂಜು ಕೊರಳೊಡ್ಡಿದ್ದಾರೆ.
1 / 6
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ಇಂದು ಸೆಂಚೂರಿಯನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲೂ ಟಾಸ್ ಸೋತ ಭಾರತ ಮತ್ತೆ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದರೆ ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಂಜು, ಇದೀಗ ಸತತ ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
2 / 6
ವಾಸ್ತವವಾಗಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅಬ್ಬರದಿಂದಲೇ ಆರಂಭಿಸಿದ್ದ ಸಂಜು, 4 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಆದರೆ ಇದೀಗ ದಿಢೀರ್ ಫಾರ್ಮ್ ಕಳೆದುಕೊಂಡಿದ್ದಾರೆ. ಸರಣಿಯ ಎರಡನೇ ಪಂದ್ಯದಲ್ಲಿ ಖಾತೆ ತೆರೆಯದ ಸಂಜು, ಇದೀಗ ಸರಣಿಯ ಮೂರನೇ ಪಂದ್ಯದಲ್ಲೂ ಸೊನ್ನೆ ಸುತ್ತಿದ್ದಾರೆ. ಇದರೊಂದಿಗೆ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
3 / 6
ಸಂಜು ಸ್ಯಾಮ್ಸನ್ ಟಿ20ಯಲ್ಲಿ ಇದುವರೆಗೆ ಟೀಂ ಇಂಡಿಯಾ ಪರ 32 ಇನ್ನಿಂಗ್ಸ್ ಆಡಿದ್ದು, ಈ ಅವಧಿಯಲ್ಲಿ 6 ಬಾರಿ ಖಾತೆ ತೆರೆಯದೆ ಔಟಾಗಿದ್ದಾರೆ. ಅದೇ ಸಮಯದಲ್ಲಿ, ಈ ವರ್ಷ ಅವರು 5 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಈ ಮೂಲಕ ಒಂದು ವರ್ಷದಲ್ಲಿ 5 ಬಾರಿ ಖಾತೆ ತೆರೆಯದೆ ಔಟ್ ಆದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಬೇಡದ ದಾಖಲೆ ಸಂಜು ಪಾಲಾಗಿದೆ.
4 / 6
ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಈಗ ಮೂರನೇ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಇದುವರೆಗೆ 12 ಬಾರಿ ಸೊನ್ನೆ ಸುತ್ತಿದ್ದರೆ, ವಿರಾಟ್ ಕೊಹ್ಲಿ 7 ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
5 / 6
ಇದಲ್ಲದೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಧಿಕ ಬಾರಿ ಸೊನ್ನೆಗೆ ಔಟಾದ ಭಾರತೀಯ ವಿಕೆಟ್ ಕೀಪರ್‌ಗಳ ಪಟ್ಟಿಯಲ್ಲೂ ಸಂಜು ಮೊದಲ ಸ್ಥಾನದಲ್ಲಿದ್ದರೆ, 4 ಬಾರಿ ಸೊನ್ನೆ ಸುತ್ತಿರುವ ರಿಷಬ್ ಪಂತ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ, ಯಾವುದೇ ಭಾರತೀಯ ವಿಕೆಟ್‌ಕೀಪರ್ ಟಿ20ಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ 0 ರನ್ ಗಳಿಸಿಲ್ಲ.
6 / 6
ಈ ಸರಣಿಯ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳಲ್ಲಿ 107 ರನ್ ಗಳಿಸಿದ್ದರು. ಇದಲ್ಲದೆ ಅವರು ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸತತ ಎರಡು ಟಿ20 ಪಂದ್ಯಗಳಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಆದರೆ ಇದೀಗ ಸತತ 2 ಪಂದ್ಯಗಳಲ್ಲಿಯೂ ಡಕ್ ಔಟ್ ಆಗಿದ್ದಾರೆ.