
ಒಂದೇ ವರ್ಷದಲ್ಲಿ ಮೂರನೇ ಬಾರಿ ಪಾಕಿಸ್ತಾನ್ ತಂಡದ ನಾಯಕ ಬದಲಾಗಿದ್ದಾರೆ. ಈ ಬದಲಾವಣೆಯೊಂದಿಗೆ ಈ ಬಾರಿ ಕ್ಯಾಪ್ಟನ್ ಪಟ್ಟ ಅಲಂಕರಿಸಿರುವುದು ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ. ಹೌದು, ಪಾಕಿಸ್ತಾನ್ ಏಕದಿನ ತಂಡದ ನೂತನ ನಾಯಕನಾಗಿ ಶಾಹೀನ್ ಅಫ್ರಿದಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ನಾಯಕರಾಗಿದ್ದ ಮೊಹಮ್ಮದ್ ರಿಝ್ವಾನ್ ಅವರನ್ನು ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಲಾಗಿದ್ದು, ಅವರ ಬದಲಿಗೆ ಇದೀಗ ಶಾಹೀನ್ ಅಫ್ರಿದಿ ಪಟ್ಟ ಕಟ್ಟಲಾಗಿದೆ. ಅದರಂತೆ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶಾಹೀನ್ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.

ಇದಕ್ಕೂ ಮುನ್ನ ಶಾಹೀನ್ ಶಾ ಅಫ್ರಿದಿ ಪಾಕ್ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು. 2023ರ ಏಕದಿನ ವಿಶ್ವಕಪ್ನಲ್ಲಿನ ಹೀನಾಯ ಪ್ರದರ್ಶನದ ಬೆನ್ನಲ್ಲೇ ಬಾಬರ್ ಆಝಂ ಅವರನ್ನು ಪಾಕ್ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಶಾಹೀನ್ ಅಫ್ರಿದಿಯನ್ನು ನಾಯಕನಾಗಿ ನೇಮಿಸಲಾಗಿತ್ತು.

ಅದರಂತೆ ಶಾಹೀನ್ ಅಫ್ರಿದಿ ನಾಯಕತ್ವದಲ್ಲಿ ನ್ಯೂಝಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಿd್ದ ಪಾಕಿಸ್ತಾನ್ ತಂಡವು 4-1 ಅಂತರದಿಂದ ಸೋಲನುಭವಿಸಿತ್ತು. ಈ ಸೋಲಿನ ಬೆನ್ನಲ್ಲೇ ಶಾಹೀನ್ ಅಫ್ರಿದಿಯನ್ನು ನಾಯಕನ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿತ್ತು. ಅಲ್ಲದೆ ಬಾಬರ್ ಆಝಂಗೆ ಮತ್ತೆ ನಾಯಕತ್ವ ನೀಡಲಾಗಿತ್ತು.

ಇದಾದ ಬಳಿಕ 2024ರ ಟಿ20 ವಿಶ್ವಕಪ್ನಲ್ಲಿ ಬಾಬರ್ ಆಝಂ ಮುಂದಾಳತ್ವದಲ್ಲಿ ಪಾಕ್ ಪಡೆ ಹೀನಾಯ ಪ್ರದರ್ಶನ ನೀಡಿತ್ತು. ಹೀಗಾಗಿ ಬಾಬರ್ ಆಝಂ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಮೊಹಮ್ಮದ್ ರಿಝ್ವಾನ್ಗೆ ಕ್ಯಾಪ್ಟನ್ ಪಟ್ಟ ನೀಡಲಾಯಿತು. ಇದೀಗ ಮೊಹಮ್ಮದ್ ರಿಝ್ವಾನ್ ಅವರನ್ನು ನಾಯಕತ್ವದಿಂದ ತೆಗೆದು ಹಾಕಲಾಗಿದೆ. ಅವರ ಬದಲಿಗೆ ಶಾಹೀನ್ ಅಫ್ರಿದಿಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ.