
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 11 ರಂದು ಪ್ರಾರಂಭವಾಗಲಿದೆ. ಈ ಸರಣಿಗೆ ಟೀಂ ಇಂಡಿಯಾವನ್ನು ಈಗಾಗಲೇ ಘೋಷಿಸಲಾಗಿದೆ. ಆದರೆ ಉಪನಾಯಕತ್ವದ ಜವಾಬ್ದಾರಿ ಹೊತ್ತಿರುವ ಶ್ರೇಯಸ್ ಅಯ್ಯರ್ ಆಡುವುದು ಅವರ ಫಿಟ್ನೆಸ್ ಅವಲಂಭಿಸಿರುತ್ತದೆ ಎಂದು ಬಿಸಿಸಿಐ ಉಲ್ಲೇಖಿಸಿತ್ತು .

ಅದರಂತೆ ಇಂಜುರಿಯಿಂದ ಚೇತರಿಸಿಕೊಂಡು ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದ ಶ್ರೇಯಸ್ ಅಯ್ಯರ್ ತಮ್ಮ ಫಿಟ್ನೆಸ್ ಸಾಭೀತುಪಡಿಸಿದಲ್ಲದೆ, ಅರ್ಧಶತಕ ಬಾರಿಸುವುದರೊಂದಿಗೆ ತಮ್ಮ ಫಾರ್ಮ್ ಕೂಡ ಖಚಿತಪಡಿಸಿದ್ದರು. ಇದೀಗ ಅಯ್ಯರ್ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ವರದಿ ನೀಡಿದೆ. ಇದರಿಂದಾಗಿ ಅವರು ಸರಣಿಯಲ್ಲಿ ಆಡಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ , ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಶ್ರೇಯಸ್ ಅಯ್ಯರ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಘೋಷಿಸಿದೆ. ಇದರಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಯ್ಯರ್ ತಂಡದ ಪರ ಕಣಕ್ಕಿಳಿಯುವುದನ್ನು ಬಹುತೇಕ ದೃಢಪಡಿಸಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಶ್ರೇಯಸ್ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಬಿದ್ದು , ಗುಲ್ಮಕ್ಕೆ ಗಾಯವಾಯಿತು, ಇದರಿಂದಾಗಿ ಆಸ್ಪತ್ರೆಗೂ ದಾಖಲಾಗಿದ್ದ ಅಯ್ಯರ್ ಸುಮಾರು ಮೂರು ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

ಇದೀಗ ಗಾಯದಿಂದ ಚೇತರಿಸಿಕೊಂಡಿರುವ ಅಯ್ಯರ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡದ ನಾಯಕತ್ವವಹಿಸಿಕೊಂಡಿದ್ದು ಮಾತ್ರವಲ್ಲದೆ, ಹಿಮಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 53 ಎಸೆತಗಳಲ್ಲಿ 82 ರನ್ಗಳ ಇನ್ನಿಂಗ್ಸ್ ಆಡಿದ್ದರು. ಹೀಗಾಗಿ ಅಯ್ಯರ್ಗೆ ಅಂದೇ ಬಿಸಿಸಿಐನಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು.

ಉಳಿದಂತೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ. ಇದೀಗ ಶ್ರೇಯಸ್ ಅಯ್ಯರ್ ಫಿಟ್ ಆಗಿರುವ ಕಾರಣ, ಅವರ ಅನುಪಸ್ಥಿತಿಯಲ್ಲಿ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 4 ನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರುತುರಾಜ್ ಗಾಯಕ್ವಾಡ್ ತಮ್ಮ ಅವಕಾಶಕ್ಕಾಗಿ ಇನ್ನಷ್ಟು ದಿನಗಳು ಕಾಯಬೇಕಾಗಿದೆ.