
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಹೊರಬಿದ್ದಿದ್ದಾರೆ. ಬೆನ್ನು ನೋವಿನ ಕಾರಣ ಅಯ್ಯರ್ಗೆ ವೈದ್ಯರು ವಿಶ್ರಾಂತಿ ಸೂಚಿಸಿದ್ದು, ಹೀಗಾಗಿ 3 ಪಂದ್ಯಗಳ ಸರಣಿಯಲ್ಲಿ ಬಲಗೈ ಬ್ಯಾಟ್ಸ್ಮನ್ ಕಾಣಿಸಿಕೊಳ್ಳುವುದಿಲ್ಲ.

ಇನ್ನು ಶ್ರೇಯಸ್ ಅಯ್ಯರ್ ಅವರ ಸ್ಥಾನದಲ್ಲಿ ಇದೀಗ ತಂಡಕ್ಕೆ ಯುವ ಬ್ಯಾಟರ್ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುತ್ತಿರುವ ಪಾಟಿದಾರ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ದೇಶೀಯ ಅಂಗಳದಲ್ಲಿ ಮಿಂಚಿದ್ದರು. ಹೀಗಾಗಿ ಶ್ರೇಯಸ್ ಸ್ಥಾನದಲ್ಲಿ ಪಾಟಿದಾರ್ಗೆ ಅವಕಾಶ ನೀಡಲಾಗಿದೆ.

ಜನವರಿ 18 ರಿಂದ ಭಾರತ-ನ್ಯೂಜಿಲೆಂಡ್ ನಡುವಣ ಸರಣಿ ಶುರುವಾಗಲಿದೆ. ಈ ಸರಣಿಯಲ್ಲಿ ಭಾರತ ತಂಡವು 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ. ಮೊದಲಿಗೆ ಏಕದಿನ ಸರಣಿ ನಡೆಯಲಿದ್ದು, ಇದಾದ ಬಳಿಕ ಟಿ20 ಸರಣಿ ಜರುಗಲಿದೆ.

ಮೊದಲ ಏಕದಿನ ಪಂದ್ಯವು ಹೈದರಾಬಾದ್ನಲ್ಲಿ ಜನವರಿ 18 ರಂದು ನಡೆಯಲಿದ್ದು, ಜನವರಿ 21 ರಂದು ನಡೆಯಲಿರುವ 2ನೇ ಪಂದ್ಯಕ್ಕೆ ರಾಯಪುರದ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು ಮೂರನೇ ಪಂದ್ಯವು ಜನವರಿ 24 ರಂದು ಇಂಧೋರ್ನಲ್ಲಿ ನಡೆಯಲಿದೆ. ಈ ಸರಣಿಗಾಗಿ ಟೀಮ್ ಇಂಡಿಯಾ ಈ ಕೆಳಗಿನಂತಿದೆ.

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಶಹಬಾಝ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.