
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಂ ಇಂಡಿಯಾಕ್ಕೆ ಒಳ್ಳೆಯ ಸುದ್ದಿ ಸಿಕ್ಕಿದೆ. ಭಾರತದ ಟಿ20 ತಂಡದ ಉಪನಾಯಕ ಶುಭ್ಮನ್ ಗಿಲ್ ಅವರು ಫಿಟ್ ಆಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್, ಶುಭ್ಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡಲು ಅನುಮತಿ ನೀಡಿದೆ.

ವಾಸ್ತವವಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಶುಭ್ಮನ್ ಗಿಲ್ಗೆ ಕುತ್ತಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ತಂಡದಿಂದ ಹೊರಗಿಡಲಾಯಿತು. ಇದರಿಂದಾಗಿ ಅವರು ಏಕದಿನ ಸರಣಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಹಾಗೆಯೇ ಈ ಮೊದಲು ಗಿಲ್ ಟಿ20 ಸರಣಿ ಆಡುವುದು ಅನುಮಾನವಾಗಿತ್ತು. ಆದರೀಗ ಪೂರ್ಣವಾಗಿ ಚೇತರಿಸಿಕೊಂಡಿರುವ ಗಿಲ್, ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಈ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ್ದ ಆಯ್ಕೆ ಮಂಡಳಿ ಶುಭಮನ್ ಗಿಲ್ ಅವರನ್ನು ತಂಡದಲ್ಲಿ ಆಯ್ಕೆ ಮಾಡಿತ್ತು. ಆದರೆ ಅವರು ಆಡುವುದು ಅವರ ಫಿಟ್ನೆಸ್ ಆಧರಿಸಿರುತ್ತದೆ ಎಂದಿತ್ತು. ಆದ್ದರಿಂದ ಶುಭ್ಮನ್ ಗಿಲ್ ಟಿ20 ಸರಣಿಯಲ್ಲಿ ಭಾಗವಹಿಸುವುದು ಖಚಿತವಾಗಿರಲಿಲ್ಲ.

ಇದೀಗ ಬೆಂಗಳೂರಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್, ಟೀಂ ಇಂಡಿಯಾದ ಮ್ಯಾನೇಜ್ಮೆಂಟ್ಗೆ ಕಳುಹಿಸಿದ ಪತ್ರದಲ್ಲಿ, ಶುಭಮನ್ ಗಿಲ್ ತಮ್ಮ ಪುನರ್ವಸತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅವರು ಅಗತ್ಯವಿರುವ ಮಾನದಂಡಗಳನ್ನು ಪೂರೈಸಿದ್ದಾರೆ. ಹೀಗಾಗಿ ಅವರು ಆಟದ ಎಲ್ಲಾ ಸ್ವರೂಪಗಳನ್ನು ಆಡಲು ಫಿಟ್ ಆಗಿದ್ದಾರೆ ಎಂದು ತಿಳಿಸಿದೆ.

ಮೇಲೆ ಹೇಳಿದಂತೆ ಗಾಯದ ಕಾರಣದಿಂದಾಗಿ ಶುಭ್ಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಆದರೆ ಈಗ ಅವರು ಟಿ20 ಸರಣಿಯಲ್ಲಿ ಭಾಗವಹಿಸುವ ಬಗ್ಗೆ ಇದ್ದ ಎಲ್ಲಾ ಸಸ್ಪೆನ್ಸ್ ಕೊನೆಗೊಂಡಿದೆ. ಗಿಲ್ ಆಗಮನದಿಂದಾಗಿ ತಂಡದ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲಗೊಳ್ಳಲಿದೆ.
Published On - 6:58 pm, Sat, 6 December 25