
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದೆ. ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಮೊದಲ ಮ್ಯಾಚ್ನಲ್ಲಿ ಸೋತಿರುವ ಭಾರತ ತಂಡವು ಸರಣಿ ಸೋಲನ್ನು ತಪ್ಪಿಸಿಕೊಳ್ಳಬೇಕಿದ್ದರೆ ಈ ಮ್ಯಾಚ್ನಲ್ಲಿ ಗೆಲ್ಲಲೇಬೇಕು.

ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ಶುಭ್ಮನ್ ಗಿಲ್ ಕಣಕ್ಕಿಳಿಯುವುದು ಡೌಟ್. ಏಕೆಂದರೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಕುತ್ತಿಗೆ ನೋವಿನ ಸಮಸ್ಯೆಗೀಡಾದ ಗಿಲ್ ಮೊದಲ ಇನಿಂಗ್ಸ್ ಬಳಿಕ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ.

ಕುತ್ತಿಗೆ ಭಾಗದ ಸ್ನಾಯು ಸೆಳೆತದ ನೋವಿನಿಂದಾಗಿ ಮೊದಲ ಇನಿಂಗ್ಸ್ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿಯೇ ಅವರು ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಬಂದಿರಲಿಲ್ಲ. ಇದೀಗ ಗಿಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದಾಗ್ಯೂ ಮತ್ತೆ ಕಣಕ್ಕಿಳಿಯಲು ಅವರು ಸಂಪೂರ್ಣ ಫಿಟ್ ಆಗಿಲ್ಲ ಎಂದು ವರದಿಯಾಗಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಶುಭ್ಮನ್ ಗಿಲ್ ಅವರಿಗೆ ವೈದ್ಯರು 4 ರಿಂದ 5 ದಿನಗಳ ಕಾಲ ವಿಶ್ರಾಂತಿ ಸೂಚಿಸಿದ್ದಾರೆ. ಅತ್ತ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದೆ. ಹೀಗಾಗಿ ಗುವಾಹಟಿಯಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.

ಇನ್ನು ಶುಭ್ಮನ್ ಗಿಲ್ ಹೊರಗುಳಿದರೆ ಭಾರತ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ. ಹಾಗೆಯೇ ಗಿಲ್ ಸ್ಥಾನದಲ್ಲಿ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸಾಯಿ ಸುದರ್ಶನ್ ಅಥವಾ ದೇವದತ್ ಪಡಿಕ್ಕಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಆಕಾಶ್ ದೀಪ್.