
ಭಾರತ ಟೆಸ್ಟ್ ಹಾಗೂ ಏಕದಿನ ತಂಡಗಳ ನಾಯಕನಾಗಿ ಶುಭ್ಮನ್ ಗಿಲ್ (Shubman Gill) ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ರೆಡ್ ಬಾಲ್ ಕ್ರಿಕೆಟ್ನಲ್ಲಿ ಕ್ಯಾಪ್ಟನ್ ಆಗಿ ಪಾದಾರ್ಪಣೆ ಮಾಡಿದ್ದ ಗಿಲ್, ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂಲಕ ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.

ಇದಕ್ಕೂ ಮುನ್ನ ಭಾರತ ಏಕದಿನ ಹಾಗೂ ಟೆಸ್ಟ್ ತಂಡಗಳ ನಾಯಕನಾಗಿ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದರು. ಇದೀಗ ಈ ಜವಾಬ್ದಾರಿಯುತ ಸ್ಥಾನಗಳನ್ನು ಶುಭ್ಮನ್ ಗಿಲ್ ಅಲಂಕರಿಸಿದ್ದಾರೆ. ಇನ್ನು ಟಿ20 ತಂಡದ ನಾಯಕತ್ವ ಒಲಿಯಲು ಗಿಲ್ ಮಾರ್ಚ್ವರೆಗೆ ಕಾಯಲೇಬೇಕು.

ಅಂದರೆ 2026ರ ಟಿ20 ವಿಶ್ವಕಪ್ವರೆಗೆ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕನಾಗಿ ಮುಂದುವರೆಯಲಿದ್ದಾರೆ. ಈ ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅಲ್ಲದೆ ಮೂರು ಸ್ವರೂಪಗಳಿಗೂ ಏಕೈಕ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಟೆಸ್ಟ್ ಹಾಗೂ ಏಕದಿನ ತಂಡಗಳ ನಾಯಕನಾಗಿ ಆಯ್ಕೆಯಾಗಿರುವ ಶುಭ್ಮನ್ ಗಿಲ್ಗೆ ಟಿ20 ತಂಡದ ಕ್ಯಾಪ್ಟನ್ ಪಟ್ಟ ಸಿಗುವುದು ಖಚಿತ ಎನ್ನಬಹುದು.

ಈ ಮೂಲಕ ಮೂರು ಸ್ವರೂಪಗಳಲ್ಲೂ ಭಾರತ ತಂಡದ ನಾಯಕನಾಗಿ ಆಯ್ಕೆಯಾದ ಆಟಗಾರ ಎನಿಸಿಕೊಳ್ಳಲು ಶುಭ್ಮನ್ ಗಿಲ್ ಮಾರ್ಚ್ ತಿಂಗಳವರೆಗೆ ಕಾಯಬೇಕು. ಏಕೆಂದರೆ 2026ರ ಟಿ20 ವಿಶ್ವಕಪ್ ಫೆಬ್ರವರಿ-ಮಾರ್ಚ್ ನಡುವೆ ನಡೆಯಲಿದ್ದು, ಈ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಸ್ಥಾನಕ್ಕೆ ಶುಭ್ಮನ್ ಗಿಲ್ ಆಯ್ಕೆಯಾಗಲಿದ್ದಾರೆ.