
ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಇದೀಗ ಸುದ್ದಿಯಲ್ಲಿದ್ದಾರೆ. ಇಷ್ಟು ದಿನ ಮೈದಾನದಲ್ಲಿನ ದಾಖಲೆಯ ಮೂಲಕ ಸುದ್ದಿಯಲ್ಲಿದ್ದ ಸುರ ಸುಂದರಾಂಗಿ ಈ ಬಾರಿ ಭಾರೀ ಮೊತ್ತಕ್ಕೆ ಹರಾಜಾಗುವ ಮೂಲಕ ದಾಖಲೆ ಬರೆದಿದ್ದಾರೆ.

ಹೌದು, ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಭರ್ಜರಿ ಮೊತ್ತಕ್ಕೆ ಹರಾಜಾದ ದಾಖಲೆ ಸ್ಮೃತಿ ಮಂಧಾನ ಪಾಲಾಗಿದೆ. ಸೋಮವಾರ ಮುಂಬೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರ್ಸಿಬಿ ಫ್ರಾಂಚೈಸಿಯು ಟೀಮ್ ಇಂಡಿಯಾ ಆಟಗಾರ್ತಿಯನ್ನು ಬರೋಬ್ಬರಿ 3.4 ಕೋಟಿ ರೂ.ಗೆ ಖರೀದಿಸಿದೆ.

ಇದರ ಬೆನ್ನಲ್ಲೇ ಸ್ಮೃತಿ ಮಂಧಾನ ಹೆಸರು ವೈರಲ್ ಆಗಲು ಆರಂಭಿಸಿದೆ. ಈ ಬಾರಿ ಕೇವಲ ಹರಾಜಿನ ಕಾರಣಕ್ಕಾಗಿ ಮಾತ್ರ ವೈರಲ್ ಆಗಿಲ್ಲ. ಬದಲಾಗಿ ಅವರ ವಿದ್ಯಾಭ್ಯಾಸ ಹಾಗೂ ವಯಸ್ಸನ್ನೂ ಕೂಡ ಅಭಿಮಾನಿಗಳು ಜಾಲಾಡಿದ್ದಾರೆ. ಸ್ಮೃತಿ ಮಂಧಾನ ಏನು ಓದಿದ್ದಾರೆ? ಎಲ್ಲಿಯವರು? ಎಂಬಿತ್ಯಾದಿಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

1996, ಜುಲೈ 18 ರಂದು ಮುಂಬೈನ ಮಾರ್ವಾಡಿ ಸಮುದಾಯದವರಾದ ಸ್ಮಿತಾ ಮತ್ತು ಶ್ರೀನಿವಾಸ್ ದಂಪತಿಗಳ 2ನೇ ಮಗುವಾಗಿ ಸ್ಮೃತಿ ಮಂಧಾನ ಜನಿಸಿದರು. ಆಕೆಗೆ ಎರಡು ವರ್ಷದವಳಿದ್ದಾಗ, ಅವರ ಕುಟುಂಬವು ಮಹಾರಾಷ್ಟ್ರದ ಸಾಂಗ್ಲಿಯ ಮಾಧವನಗರಕ್ಕೆ ಸ್ಥಳಾಂತರಗೊಂಡಿತು.

ಬಾಲ್ಯವನ್ನು ಸಾಂಗ್ಲಿಯಲ್ಲೇ ಕಳೆದಿದ್ದ ಸ್ಮೃತಿ ಅಲ್ಲೇ ಶಾಲಾ ಶಿಕ್ಷಣವನ್ನು ಪಡೆದರು. ಇನ್ನು ಸಾಂಗ್ಲಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿದ ಬಳಿಕ ಅವರು ಚಿಂತಾಮನ್ ರಾವ್ ವಾಣಿಜ್ಯ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ (ಬಿಕಾಂ) ಓದಿದ್ದಾರೆ. ಇದರ ನಡುವೆ ಕ್ರಿಕೆಟ್ ಅಭ್ಯಾಸವನ್ನೂ ಕೂಡ ಆರಂಭಿಸಿದ್ದರು.

ಸಹೋದರ ಶ್ರವಣ್ ಮಂಧಾನ ಅವರು ಮಹಾರಾಷ್ಟ್ರ ರಾಜ್ಯ ಅಂಡರ್-16 ಪಂದ್ಯಾವಳಿಗಳಲ್ಲಿ ಕ್ರೀಡೆಯನ್ನು ಆಡುವುದನ್ನು ನೋಡಿದ ನಂತರ ಕ್ರಿಕೆಟಿಗಳಾಗಬೇಕೆಂದು ನಿರ್ಧರಿಸಿದರು. ವಿಶೇಷ ಎಂದರೆ ಅವರ ತಂದೆ ಶ್ರೀನಿವಾಸ್ ಮಂಧಾನ ಕೂಡ ಸಾಂಗ್ಲಿಗಾಗಿ ಜಿಲ್ಲಾ ಮಟ್ಟದಲ್ಲಿ ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ಮನೆಯವರಿಂದ ಸಂಪೂರ್ಣ ಬೆಂಬಲ ದೊರೆಯಿತು.

ಸ್ಮೃತಿ ಒಂಬತ್ತನೇ ವಯಸ್ಸಿನಲ್ಲಿ ಮಹಾರಾಷ್ಟ್ರದ 15 ವರ್ಷದೊಳಗಿನವರ ತಂಡದಲ್ಲಿ ಮತ್ತು ಹನ್ನೊಂದನೇ ವಯಸ್ಸಿನಲ್ಲಿ ರಾಜ್ಯದ 19 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಪಡೆದರು. ಆ ಬಳಿಕ ಅವರು ಹಿಂತಿರುಗಿ ನೋಡಿಲ್ಲ ಎನ್ನಬಹುದು.

2013 ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದ ಯುವ ಆಟಗಾರ್ತಿ ಇಂದು ಉಪನಾಯಕಿಯಾಗಿ ಮಿಂಚುತ್ತಿದ್ದಾರೆ. ಭಾರತ ತಂಡದ ಪರ ಇದುವರೆಗೆ 4 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 1 ಶತಕದೊಂದಿಗೆ 325 ರನ್ ಕಲೆಹಾಕಿದ್ದಾರೆ.

ಹಾಗೆಯೇ 77 ಏಕದಿನ ಪಂದ್ಯಗಳಿಂದ 5 ಶತಕ ಹಾಗೂ 25 ಅರ್ಧಶತಕಗಳೊಂದಿಗೆ 3073 ರನ್ ಬಾರಿಸಿದ್ದಾರೆ. ಇನ್ನು 112 ಟಿ20 ಪಂದ್ಯಗಳಲ್ಲಿ 2651 ರನ್ ಕಲೆಹಾಕಿದ್ದಾರೆ. ಈ ವೇಳೆ 20 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಇದೀಗ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ 26 ವರ್ಷದ ಸ್ಮೃತಿ ಮಂಧಾನ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಆರ್ಸಿಬಿ ಮಹಿಳಾ ತಂಡವನ್ನು ಅವರೇ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.