ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಸ್ಮತಿ ಮಂಧಾನ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ನ್ಯೂಝಿಲೆಂಡ್ನ ಸ್ಟಾರ್ ಆಟಗಾರ್ತಿ ಸುಝಿ ಬೆಟ್ಸ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತರೂ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಸ್ಮತಿ ಮಂಧಾನ ಉತ್ತಮ ಆರಂಭ ಒದಗಿಸಿದ್ದರು. 41 ಎಸೆತಗಳನ್ನು ಎದುರಿಸಿದ ಸ್ಮೃತಿ 1 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 62 ರನ್ ಸಿಡಿಸಿದರು. ಈ ಅರ್ಧಶತಕದೊಂದಿಗೆ ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ನ್ಯೂಝಿಲೆಂಡ್ನ ಸುಝಿ ಬೆಟ್ಸ್ ಹೆಸರಿನಲ್ಲಿತ್ತು. 171 ಟಿ20 ಪಂದ್ಯಗಳಲ್ಲಿ 168 ಇನಿಂಗ್ಸ್ ಆಡಿರುವ ಸುಝಿ ಒಟ್ಟು 28 ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆ ಮುರಿಯುವಲ್ಲಿ ಸ್ಮೃತಿ ಯಶಸ್ವಿಯಾಗಿದ್ದಾರೆ.
ಟೀಮ್ ಇಂಡಿಯಾ ಪರ 147 ಟಿ20 ಪಂದ್ಯಗಳಲ್ಲಿ 141 ಇನಿಂಗ್ಸ್ ಆಡಿರುವ ಸ್ಮೃತಿ ಮಂಧಾನ ಒಟ್ಟು 29 ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಮಹಿಳಾ ಟಿ20 ಇತಿಹಾಸದಲ್ಲೇ ಅತೀ ಹೆಚ್ಚು ಹಾಫ್ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಇನ್ನು ಸ್ಮೃತಿ ಮಂಧಾನ ಅವರ ಈ ಅರ್ಧಶತಕದ ನೆರವಿನಿಂದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 15.4 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 160 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.