
ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದ ಮೂಲಕ ಇಂಗ್ಲೆಂಡ್ನ ಯುವ ವೇಗಿ ಸೋನಿ ಬೇಕರ್ (Sonny Baker) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಪಾದಾರ್ಪಣೆ ಪಂದ್ಯದಲ್ಲೇ ದುಬಾರಿಯಾಗುವ ಮೂಲಕ ಸೋನಿ ಬೇಡದ ದಾಖಲೆಯೊಂದಕ್ಕೆ ಕೊರೊಳೊಡ್ಡಿದ್ದಾರೆ.

ಲೀಡ್ಸ್ನ ಹೆಡಿಂಗ್ಲೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಕೇವಲ 131 ರನ್ಗಳಿಗೆ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಪರ ಐಡೆನ್ ಮಾರ್ಕ್ರಾಮ್ ಹಾಗೂ ರಯಾನ್ ರಿಕೆಲ್ಟನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಅತ್ತ ಐಡೆನ್ ಮಾರ್ಕ್ರಾಮ್ ಆರ್ಭಟದಿಂದ ಸೋನಿ ಬೇಕರ್ ಸಂಪೂರ್ಣ ಲಯ ತಪ್ಪಿದರು. ಪರಿಣಾಮ 22 ವರ್ಷದ ಯುವ ವೇಗಿ 7 ಓವರ್ಗಳಲ್ಲಿ 76 ರನ್ ಚಚ್ಚಿಸಿಕೊಂಡರು. ಇದರೊಂದಿಗೆ ಇಂಗ್ಲೆಂಡ್ ಪರ ಏಕದಿನ ಪಾದಾರ್ಪಣೆ ಪಂದ್ಯದಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎಂಬ ಅನಗತ್ಯ ದಾಖಲೆ ಸೋನಿ ಬೇಕರ್ ಪಾಲಾಯಿತು.

ಇದಕ್ಕೂ ಮುನ್ನ ಈ ಬೇಡದ ದಾಖಲೆ ಲಿಯಾಮ್ ಡಾಸನ್ ಹೆಸರಿನಲ್ಲಿತ್ತು. 2016 ರಲ್ಲಿ ಪಾಕಿಸ್ತಾನ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಕೆರಿಯರ್ ಆರಂಭಿಸಿದ್ದ ಡಾಸನ್ 8 ಓವರ್ಗಳಲ್ಲಿ 70 ರನ್ ಬಿಟ್ಟು ಕೊಟ್ಟಿದ್ದರು. ಈ ಮೂಲಕ ಚೊಚ್ಚಲ ಪಂದ್ಯದಲ್ಲಿ ಅತೀ ಹೆಚ್ಚು ರನ್ ನೀಡಿದ ಇಂಗ್ಲೆಂಡ್ ಬೌಲರ್ ಎನಿಸಿಕೊಂಡಿದ್ದರು.

ಇದೀಗ ಈ ಅನಗತ್ಯ ದಾಖಲೆಯನ್ನು ಸೋನಿ ಬೇಕರ್ ತಮ್ಮದಾಗಿಸಿಕೊಂಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 7 ಓವರ್ಗಳಲ್ಲಿ 10.90 ಸರಾಸರಿಯಲ್ಲಿ 76 ರನ್ ನೀಡುವ ಸೋನಿ ಅತ್ಯಂತ ಕಳಪೆ ದಾಖಲೆಯೊಂದಿಗೆ ಏಕದಿನ ಕೆರಿಯರ್ ಆರಂಭಿಸಿದ್ದಾರೆ.