ವಿಶ್ವ ದಾಖಲೆಗಳ ಮೇಲೆ ದಾಖಲೆ ಬರೆದ ಕೀರನ್ ಪೊಲಾರ್ಡ್
Kieron Pollard Record: ಟಿ20 ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ ನಾಗಾಲೋಟ ಮುಂದುವರೆದಿದೆ. ಕೆಲ ದಿನಗಳ ಹಿಂದೆಯಷ್ಟೇ 14 ಸಾವಿರ ರನ್ + 300 ವಿಕೆಟ್ ಪಡೆದು ಹೊಸ ವಿಶ್ವ ದಾಖಲೆ ಬರೆದಿದ್ದ ಪೊಲಾರ್ಡ್ ಇದೀಗ ಮತ್ತೊಂದು ವರ್ಲ್ಡ್ ರೆಕಾರ್ಡ್ಗೆ ಕೊರೊಳೊಡ್ಡಿದ್ದಾರೆ. ಅದು ಸಹ ಸಿಕ್ಸ್ ಸಿಡಿಸುವ ಮೂಲಕ ಎಂಬುದು ವಿಶೇಷ.
Updated on:Sep 03, 2025 | 7:57 AM

ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್ (Kieron Pollard) ಟಿ20 ಕ್ರಿಕೆಟ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಕಳೆದ ಪಂದ್ಯದ ಮೂಲಕ ಟಿ20 ಕ್ರಿಕೆಟ್ನಲ್ಲಿ 14 ಸಾವಿರ ರನ್ ಕಲೆಹಾಕಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದ ಪೊಲಾರ್ಡ್ ಇದೀಗ ಮತ್ತೊಂದು ಮೈಲುಗಲ್ಲು ಮುಟ್ಟಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್ನ 19ನೇ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ವಿರುದ್ಧ ಟ್ರಿನ್ಬಾಗೊ ನೈಟ್ ರೈಡರ್ಸ್ ಪರ ಕಣಕ್ಕಿಳಿದ ಪೊಲಾರ್ಡ್ ಕೇವಲ 29 ಎಸೆತಗಳಲ್ಲಿ 65 ರನ್ ಸಿಡಿಸಿದ್ದರು. ಈ 65 ರನ್ಗಳಲ್ಲಿ 8 ಸಿಕ್ಸ್ಗಳು ಸೇರಿದ್ದವು.

ಈ ಎಂಟು ಸಿಕ್ಸರ್ಗಳೊಂದಿಗೆ ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್ನಲ್ಲಿ 950 ಸಿಕ್ಸ್ ಬಾರಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಲ್ರೌಂಡರ್ ಎಂಬ ಹೆಗ್ಗಳಿಕೆಗೂ ಪೊಲಾರ್ಡ್ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಟಿ20 ಕ್ರಿಕೆಟ್ನಲ್ಲಿ 950+ ಸಿಕ್ಸ್ ಸಿಡಿಸಿರುವುದು ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್. ಟಿ20 ಕ್ರಿಕೆಟ್ನಲ್ಲಿ 455 ಇನಿಂಗ್ಸ್ ಆಡಿರುವ ಗೇಲ್ 10060 ಎಸೆತಗಳಲ್ಲಿ 1056 ಸಿಕ್ಸ್ ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದೀಗ ಈ ಪಟ್ಟಿಯಲ್ಲಿ ಕೀರನ್ ಪೊಲಾರ್ಡ್ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 38 ವರ್ಷದ ಪೊಲಾರ್ಡ್ ಈವರೆಗೆ 635 ಟಿ20 ಇನಿಂಗ್ಸ್ ಆಡಿದ್ದು, ಈ ವೇಳೆ 9316 ಎಸೆತಗಳನ್ನು ಎದುರಿಸಿದ್ದಾರೆ. ಇದರ ನಡುವೆ 950 ಸಿಕ್ಸ್ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಸದ್ಯ 950 ಸಿಕ್ಸ್ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿರುವ ಕೀರನ್ ಪೊಲಾರ್ಡ್ ಮುಂಬರುವ ದಿನಗಳಲ್ಲಿ 107 ಸಿಕ್ಸ್ ಬಾರಿಸಿದರೆ ಕ್ರಿಸ್ ಗೇಲ್ ಹೆಸರಿನಲ್ಲಿರುವ ವಿಶ್ವ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಬಹುದು. ಅಷ್ಟೇ ಅಲ್ಲದೆ ಈ ಸಿಕ್ಸ್ಗಳೊಂದಿಗೆ ಟಿ20 ಕ್ರಿಕೆಟ್ನ ರನ್ ಸರದಾರರ ಪಟ್ಟಿಯಲ್ಲೂ ಗೇಲ್ (14562) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ಕೀರನ್ ಪೊಲಾರ್ಡ್ (14077) ಗೆ ಉತ್ತಮ ಅವಕಾಶವಿದೆ.
Published On - 7:57 am, Wed, 3 September 25

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



