
ಸೌತ್ ಆಫ್ರಿಕಾ-ಆಸ್ಟ್ರೇಲಿಯಾ (SA vs AUS) ನಡುವಣ ಸರಣಿ ಮುಕ್ತಾಯಗೊಂಡಿದೆ. ಈ ಸರಣಿಯಲ್ಲಿ ಆಡಲಾದ 3 ಪಂದ್ಯಗಳ ಟಿ20 ಸಿರೀಸ್ ಅನ್ನು ಆಸ್ಟ್ರೇಲಿಯಾ 2-1 ಅಂತರದಿಂದ ಗೆದ್ದುಕೊಂಡರೆ, ಏಕದಿನ ಸರಣಿಯಲ್ಲಿ ಆತಿಥೇಯರನ್ನು 2-1 ಬಗ್ಗು ಬಡಿಯುವಲ್ಲಿ ಸೌತ್ ಆಫ್ರಿಕಾ ತಂಡ ಯಶಸ್ವಿಯಾಗಿದೆ.

ಈ ಸರಣಿ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ಏಕದಿನ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಕಾಡೆ ಮಲಗಿಸುವ ವಿಷಯದಲ್ಲಿ ಎಂಬುದು ವಿಶೇಷ. ಅಂದರೆ ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ದ್ವಿಪಕ್ಷೀಯ ಸರಣಿ ಗೆದ್ದ ದಾಖಲೆಯೊಂದನ್ನು ಸೌತ್ ಆಫ್ರಿಕಾ ತನ್ನದಾಗಿಸಿಕೊಂಡಿದೆ.

ಇದಕ್ಕೂ ಮೊದಲು ಈ ಭರ್ಜರಿ ದಾಖಲೆ ಇಂಗ್ಲೆಂಡ್ ತಂಡದ ಹೆಸರಿನಲ್ಲಿತ್ತು. 3+ ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 8 ಬಾರಿ ಸೋಲಿಸಿ ಆಂಗ್ಲರು ಭರ್ಜರಿ ದಾಖಲೆ ನಿರ್ಮಿಸಿದ್ದರು. ಇಂಗ್ಲೆಂಡ್ ತಂಡ ಬರೆದಿದ್ದ ಈ ದಾಖಲೆಯನ್ನು ಮುರಿಯುವಲ್ಲಿ ಕೊನೆಗೂ ಸೌತ್ ಆಫ್ರಿಕಾ ತಂಡ ಯಶಸ್ವಿಯಾಗಿದೆ.

ಸೌತ್ ಆಫ್ರಿಕಾ ತಂಡವು ಆಸ್ಟ್ರೇಲಿಯಾವನ್ನು 3+ ಪಂದ್ಯಗಳ ಏಕದಿನ ಸರಣಿಯಲ್ಲಿ ಈವರೆಗೆ 9 ಬಾರಿ ಸೋಲಿಸಿದೆ. ಈ ಮೂಲಕ ಬಲಿಷ್ಠ ಕಾಂಗರೂ ಪಡೆಗೆ ಅತ್ಯಧಿಕ ಸರಣಿ ಸೋಲಿನ ರುಚಿ ತೋರಿಸಿದ ತಂಡವೆಂಬ ಹೆಗ್ಗಳಿಕೆಯನ್ನು ಸೌತ್ ಆಫ್ರಿಕಾ ತನ್ನದಾಗಿಸಿಕೊಂಡಿದೆ.

ವಿಶೇಷ ಎಂದರೆ ಆಸ್ಟ್ರೇಲಿಯಾ ತಂಡವು ಕಳೆದ 9 ವರ್ಷಗಳಿಂದ ಸೌತ್ ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆದ್ದಿಲ್ಲ. 2016 ರಿಂದ ಶುರುವಾದ ಸೌತ್ ಆಫ್ರಿಕಾ ತಂಡದ ಈ ಸರಣಿ ಗೆಲುವಿನ ನಾಗಾಲೋಟ 2025 ರಲ್ಲೂ ಮುಂದುವರೆದಿದೆ. ಈ ಮೂಲಕ ಆಸೀಸ್ ವಿರುದ್ಧ ಸತತ 5 ಸರಣಿಗಳನ್ನು ಗೆದ್ದ ವಿಶೇಷ ದಾಖಲೆಯನ್ನು ಸಹ ಸೌತ್ ಆಫ್ರಿಕಾ ತಂಡ ನಿರ್ಮಿಸಿದೆ.