
ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಗುರುವಾರ (ಡಿಸೆಂಬರ್ 14) ನಡೆದ ಮೂರು ಪಂದ್ಯಗಳ ಸರಣಿಯ ಮೂರನೇ ಮತ್ತು ಅಂತಿಮ ಟಿ20ಐ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 106 ರನ್‌ಗಳಿಂದ ಸೋಲಿಸಿತು. ಈ ಮೂಲಕ ಟಿ20 ಸರಣಿ ಸಮಬಲದಿಂದ ಅಂತ್ಯಕಂಡಿತು.

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ದಾಖಲೆಯ ನಾಲ್ಕನೇ T20I ಶತಕವನ್ನು ಗಳಿಸಿ 201 ರನ್ ಗಳಿಸಲು ಸಹಾಯ ಮಾಡಿದರು. ನಂತರ ಹುಟ್ಟುಹಬ್ಬದ ಹುಡುಗ ಕುಲ್ದೀಪ್ ಯಾದವ್ 2.5 ಓವರ್‌ಗಳಲ್ಲಿ 17 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಅತಿದೊಡ್ಡ ಗೆಲುವಿಗೆ ಕಾರಣರಾದರು.

ಇದೀಗ ಟಿ20I ಸರಣಿಯ ಮುಕ್ತಾಯದ ನಂತರ, ಎರಡೂ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿ ಆಗಲಿದೆ. ಇದರ ಮೊದಲ ಪಂದ್ಯವು ಜೋಹಾನ್ಸ್‌ಬರ್ಗ್‌ನಲ್ಲಿ ಭಾನುವಾರ (ಡಿಸೆಂಬರ್ 17) ನಡೆಯಲಿದೆ. 50 ಓವರ್‌ಗಳ ಪಂದ್ಯಗಳಿಗೆ ಭಾರತ ತಂಡವನ್ನು ಕೆಎಲ್ ರಾಹುಲ್ ನಾಯಕನಾಗಿ ಮುನ್ನಡೆಸಲಿದ್ದಾರೆ.

ಸೂರ್ಯಕುಮಾರ್, ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಗಿಲ್ ಸೇರಿದಂತೆ ಭಾರತದ ಟಿ20I ತಂಡದ ಭಾಗವಾಗಿರುವ ಅನೇಕ ಆಟಗಾರರು ಏಕದಿನಗಳನ್ನು ಆಡುವುದಿಲ್ಲ. ಮುಂಬರುವ ಮೂರು ಪಂದ್ಯಗಳಲ್ಲಿ ಹೊಸ ಆಟಗಾರರು ತಂಡದಲ್ಲಿದ್ದಾರೆ. ಹಾಗಾದರೆ, ಆಫ್ರಿಕಾ ಸರಣಿಗಾಗಿ ಟಿ20I ತಂಡದಿಂದ ಭಾರತದ ಏಕದಿನ ತಂಡದಲ್ಲಿನ ಬದಲಾವಣೆಗಳ ಸಂಪೂರ್ಣ ಪಟ್ಟಿ ನೋಡೋಣ.

ಯಾರೆಲ್ಲ ಔಟ್?: ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿಕೆಟ್‌ಕೀಪರ್-ಬ್ಯಾಟರ್‌ಗಳಾದ ಜಿತೇಶ್ ಶರ್ಮಾ ಮತ್ತು ಇಶಾನ್ ಕಿಶನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಮತ್ತು ರವಿ ಬಿಷ್ಣೋಯ್ ಏಕದಿನ ಸರಣಿಯ ಭಾಗವಾಗಿಲ್ಲ. ಗಿಲ್, ಜೈಸ್ವಾಲ್, ಕಿಶನ್, ಜಡೇಜಾ ಮತ್ತು ಸಿರಾಜ್ ಟೆಸ್ಟ್ ತಂಡದ ಭಾಗವಾಗಿರುವುದರಿಂದ ದಕ್ಷಿಣ ಆಫ್ರಿಕಾದಲ್ಲಿ ಉಳಿಯುತ್ತಾರೆ.

ಯಾರು ಇನ್?: ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತಕ್ಕೆ ಇನ್ನೂ ಪದಾರ್ಪಣೆ ಮಾಡದಿರುವ ರಜತ್ ಪಾಟಿದಾರ್ ತಮಿಳುನಾಡಿನ ಯುವ ಬ್ಯಾಟರ್ ಸಾಯಿ ಸುದರ್ಶನ್ ಜೊತೆಗೆ ಏಕದಿನ ತಂಡ ಸೇರಿಸಿಕೊಂಡಿದ್ದಾರೆ. ಅಕ್ಷರ್ ಪಟೇಲ್, ಅವೇಶ್ ಖಾನ್, ಚಹಲ್ ಮತ್ತು ಸ್ಯಾಮ್ಸನ್ ಕೂಡ ಇದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ಭಾರತದ ಏಕದಿನ ತಂಡ: ಕೆಎಲ್ ರಾಹುಲ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ , ರಿಂಕು ಸಿಂಗ್, ರಜತ್ ಪಾಟಿದಾರ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ದೀಪಕ್ ಚಹರ್.