ಜೋಹಾನ್ಸ್ಬರ್ಗ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಶುಭ್ಮನ್ ಗಿಲ್ 12 ರನ್ಗಳಿಸಿ ಔಟಾದರೆ, ಇದರ ಬೆನ್ನಲ್ಲೇ ತಿಲಕ್ ವರ್ಮಾ ಶೂನ್ಯಕ್ಕೆ ಔಟಾಗಿ ನಿರ್ಗಮಿಸಿದರು.
ಈ ಹಂತದಲ್ಲಿ ಜೊತೆಗೂಡಿದ ಯಶಸ್ವಿ ಜೈಸ್ವಾಲ್ ಹಾಗೂ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಎಡಗೈ ದಾಂಡಿಗ ಯಶಸ್ವಿ 41 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 60 ರನ್ ಬಾರಿಸಿ ಔಟಾದರು.
ಇದರ ಬೆನ್ನಲ್ಲೇ ಸಿಡಿಲಬ್ಬರ ಶುರು ಮಾಡಿದ ಸೂರ್ಯಕುಮಾರ್ ಯಾದವ್ ಸೌತ್ ಆಫ್ರಿಕಾ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕೇವಲ 55 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಸ್ಪೋಟಕ ಶತಕ ಪೂರೈಸಿದರು.
ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಶತಕ ಬಾರಿಸಿದ ರೋಹಿತ್ ಶರ್ಮಾ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ಸರಿಗಟ್ಟಿದ್ದಾರೆ. ಹಿಟ್ಮ್ಯಾನ್ ಟಿ20 ಕ್ರಿಕೆಟ್ನಲ್ಲಿ 4 ಶತಕಗಳನ್ನು ಬಾರಿಸಿದ್ದರು.
ಇದೀಗ ಸೂರ್ಯಕುಮಾರ್ ಯಾದವ್ ಕೂಡ ಟಿ20 ಕ್ರಿಕೆಟ್ನಲ್ಲಿ 4 ಶತಕಗಳನ್ನು ಸಿಡಿಸುವ ಮೂಲಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ.
ಅಷ್ಟೇ ಅಲ್ಲದೆ ಅತೀ ಕಡಿಮೆ ಟಿ20 ಇನಿಂಗ್ಸ್ಗಳಲ್ಲಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟರ್ ಎಂಬ ಹಿರಿಮೆಗೂ ಸೂರ್ಯಕುಮಾರ್ ಯಾದವ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಗ್ಲೆನ್ ಮ್ಯಾಕ್ಸ್ವೆಲ್ ಹೆಸರಿನಲ್ಲಿತ್ತು.
ಗ್ಲೆನ್ ಮ್ಯಾಕ್ಸ್ವೆಲ್ 92 ಇನಿಂಗ್ಸ್ಗಳ ಮೂಲಕ 4 ಟಿ20 ಶತಕಗಳನ್ನು ಬಾರಿಸಿದ್ದರು. ಇದೀಗ ಕೇವಲ 57 ಇನಿಂಗ್ಸ್ಗಳ ಮೂಲಕ 4 ಭರ್ಜರಿ ಸೆಂಚುರಿ ಸಿಡಿಸಿ ಸೂರ್ಯಕುಮಾರ್ ಯಾದವ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಸೂರ್ಯಕುಮಾರ್ ಯಾದವ್ (100) ಅವರ ಈ ಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿದೆ. ಈ ಮೂಲಕ ಸೌತ್ ಆಫ್ರಿಕಾ ತಂಡಕ್ಕೆ ಗೆಲ್ಲಲು 202 ರನ್ಗಳ ಗುರಿ ನೀಡಿದೆ.
Published On - 10:08 pm, Thu, 14 December 23