
ಏಕದಿನ ಕ್ರಿಕೆಟ್ನ ಪಾದಾರ್ಪಣೆ ಪಂದ್ಯದಲ್ಲೇ 150 ರನ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ಸೌತ್ ಆಫ್ರಿಕಾದ ಯುವ ದಾಂಡಿಗ ಮ್ಯಾಥ್ಯೂ ಬ್ರೀಟ್ಝ್ಕೆ ( Matthew Breetzke) ಇದೀಗ ಮತ್ತೊಂದು ವರ್ಲ್ಡ್ ರೆಕಾರ್ಡ್ಗೆ ಕೊರೊಳೊಡ್ಡಿದ್ದಾರೆ. ಅದು ಕೂಡ 29 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಕೈರ್ನ್ಸ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಬ್ರೀಟ್ಝ್ಕೆ 56 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 57 ರನ್ ಬಾರಿಸಿದ್ದರು. ಈ ಐವತ್ತೇಳು ರನ್ಗಳೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಬ್ರೀಟ್ಝ್ಕೆ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದರೆ ಏಕದಿನ ಕ್ರಿಕೆಟ್ನ ಮೊದಲ ಮೂರು ಇನಿಂಗ್ಸ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಮ್ಯಾಥ್ಯೂ ಬ್ರೀಟ್ಝ್ಕೆ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಇಂಗ್ಲೆಂಡ್ನ ಮಾಜಿ ಆರಂಭಿಕ ದಾಂಡಿಗ ನಿಕ್ ನೈಟ್ ಅವರ ಹೆಸರಿನಲ್ಲಿತ್ತು.

1996 ರಲ್ಲಿ ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ನೈಕ್ ನೈಟ್ ಮೊದಲ ಮೂರು ಇನಿಂಗ್ಸ್ಗಳ ಮೂಲಕ ಬರೋಬ್ಬರಿ 264 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದಾದ ಬಳಿಕ ಸೌತ್ ಆಫ್ರಿಕಾದ ಟೆಂಬಾ ಬವುಮಾ ಮೊದಲ ಮೂರು ಇನಿಂಗ್ಸ್ಗಳಿಂದ 259 ರನ್ ಬಾರಿಸಿ ಈ ದಾಖಲೆಯ ಸನಿಹಕ್ಕೆ ತಲುಪಿದ್ದರು.

ಇದೀಗ 29 ವರ್ಷಗಳ ಬಳಿಕ ಈ ದಾಖಲೆಯನ್ನು ಮುರಿಯುವಲ್ಲಿ ಮ್ಯಾಥ್ಯೂ ಬ್ರೀಟ್ಝ್ಕೆ ಯಶಸ್ವಿಯಾಗಿದ್ದಾರೆ. ಅದು ಕೂಡ ಮೂರು ಇನಿಂಗ್ಸ್ಗಳಲ್ಲಿ ಬರೋಬ್ಬರಿ 290 ರನ್ಗಳನ್ನು ಕಲೆಹಾಕುವ ಮೂಲಕ ಎಂಬುದು ವಿಶೇಷ. ಈವರೆಗೆ ಮೂರು ಏಕದಿನ ಪಂದ್ಯಗಳನ್ನಾಡಿರುವ ಬ್ರೀಟ್ಝ್ಕೆ 1 ಶತಕ ಹಾಗೂ 2 ಅರ್ಧಶತಕಗಳೊಂದಿಗೆ 290 ರನ್ಗಳಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಮೂರು ಇನಿಂಗ್ಸ್ಗಳಲ್ಲಿ ಅತೀ ಹೆಚ್ಚು ರನ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.