ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸತತ ಮೂರು ಪಂದ್ಯಗಳಲ್ಲಿ ಬೆಂಚ್ ಕಾದಿದಿದ್ದಾರೆ. ಮೊದಲ ಪಂದ್ಯದಲ್ಲಿ ನಾಲ್ವರು ವೇಗಿಗಳನ್ನು ಕಣಕ್ಕಿಳಿಸಿ ಯಶಸ್ಸು ಸಾಧಿಸಿದ್ದ ಟೀಮ್ ಇಂಡಿಯಾ ಆ ಬಳಿಕ ಬೌಲಿಂಗ್ ವಿಭಾಗವನ್ನು ಬದಲಿಸಿರಲಿಲ್ಲ.
ಇತ್ತ ಬೌಲರುಗಳಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿಬಂತು. ಹೀಗಾಗಿಯೇ ವಿರಾಟ್ ಕೊಹ್ಲಿ ಮೂರು ಪಂದ್ಯಗಳಲ್ಲಿ 4 ವೇಗಿ + ಒಬ್ಬರು ಆಲ್ರೌಂಡರ್ರನ್ನು ಕಣಕ್ಕಿಳಿಸಿದ್ದರು. ಇದೀಗ ಈ ಸೂತ್ರ ಕೈಕೊಟ್ಟಿದೆ. ಹೆಡಿಂಗ್ಲೆಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 76 ರನ್ಗಳಿಂದ ಹೀನಾಯ ಸೋಲನುಭವಿಸಿದೆ. ಅಷ್ಟೇ ಅಲ್ಲದೆ ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-1 ಸಮಬಲ ಸಾಧಿಸಿದೆ.
ಇದೀಗ ಓವಲ್ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಈ ಪಂದ್ಯದಲ್ಲಿ ಅಶ್ವಿನ್ಗೆ ಸ್ಥಾನ ಸಿಗಲಿದೆಯಾ ಪ್ರಶ್ನೆಗೆ ಖಂಡಿತ ಸಿಗಲಿದೆ ಎಂಬ ಉತ್ತರ ಸಿಗುತ್ತದೆ. ಏಕೆಂದರೆ ಓವಲ್ ಮೈದಾನದಲ್ಲಿ ಅಶ್ವಿನ್ ಅವರ ಪ್ರದರ್ಶನ ಅತ್ಯುತ್ತಮವಾಗಿದೆ. ಅಷ್ಟೇ ಅಲ್ಲದೆ ಓವಲ್ ಮೈದಾನವು ಸ್ಪಿನ್ ಬೌಲಿಂಗ್ ಸಹಕಾರಿ. ಹೀಗಾಗಿ ಅಶ್ವಿನ್ ಸ್ಥಾನ ಬಹುತೇಕ ಖಚಿತ.
ಇನ್ನು ಅಶ್ವಿನ್ಗೆ ಅವಕಾಶ ನೀಡದಿರಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಯಾವುದೇ ಕಾರಣವಿಲ್ಲ ಎಂದು ಕೂಡ ಹೇಳಬಹುದು. ಓವಲ್ ಮೈದಾನದಲ್ಲಿ ಈ ಹಿಂದೆ ನಡೆದ ಪಂದ್ಯದಲ್ಲಿ ಒಟ್ಟು 34 ವಿಕೆಟ್ಗಳು ಉರುಳಿವೆ. ಆ ಪಂದ್ಯದಲ್ಲಿ ಅಶ್ವಿನ್ ಕೂಡ ಭಾಗವಾಗಿದ್ದರು ಎಂಬುದು ವಿಶೇಷ.
ಹೌದು, ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭವಾಗುವ ಮುನ್ನ ಅಶ್ವಿನ್ ಕೌಂಟಿ ಪಂದ್ಯವನ್ನಾಡಿದ್ದರು. ಸೋಮರ್‌ಸೆಟ್ ವಿರುದ್ದದ ಪಂದ್ಯದಲ್ಲಿ ಅಶ್ವಿನ್ ಸರ್ರೆ ಪರ ಕಣಕ್ಕಿಳಿದಿದ್ದರು. ಡ್ರಾನಲ್ಲಿ ಅಂತ್ಯಗೊಂಡಿದ್ದ ಈ ಪಂದ್ಯದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಟ್ಟು 34 ವಿಕೆಟ್ಗಳು ಬಿದ್ದಿದ್ದವು. ಇದರಲ್ಲಿ ಕೇವಲ ಸ್ಪಿನ್ನರ್‌ಗಳು 32 ವಿಕೆಟ್ ಪಡೆದಿರುವುದು ವಿಶೇಷ.
ಈ 32 ವಿಕೆಟ್‌ಗಳಲ್ಲಿ ಅಶ್ವಿನ್ 7 ವಿಕೆಟ್‌ಗಳನ್ನು ಪಡೆದಿದ್ದರು. ಎರಡನೇ ಇನಿಂಗ್ಸ್ ನಲ್ಲಿ 15 ಓವರ್ ಬೌಲಿಂಗ್ ಮಾಡಿದ್ದ ಅಶ್ವಿನ್ 27 ರನ್ ನೀಡಿ 6 ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿದ್ದರು. ಹಾಗೆಯೇ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ಪಡೆದಿದ್ದರು. ಅಶ್ವಿನ್ ಅವರಂತೆ ಇಂಗ್ಲೆಂಡ್ ಸ್ಪಿನ್ನರ್ ಜಾಕ್ ಲೀಚ್ ಕೂಡ ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಉರುಳಿಸಿದ್ದರು. ಹೀಗಾಗಿಯೇ ಓವಲ್ ಮೈದಾನ ಸ್ಪಿನ್ನರ್ಗಳ ಸ್ವರ್ಗ ಎನ್ನಲಾಗುತ್ತದೆ.
ಇದೀಗ 3ನೇ ಟೆಸ್ಟ್ ಸೋಲಿನ ಬಳಿಕ ಟೀಮ್ ಇಂಡಿಯಾ ನಾಲ್ಕನೇ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಒಂದು ವೇಳೆ 4ನೇ ಟೆಸ್ಟ್ ಕೈ ತಪ್ಪಿದರೆ ಆತಿಥೇಯ ಇಂಗ್ಲೆಂಡ್ಗೆ ಸರಣಿ ಗೆಲ್ಲುವ ಅವಕಾಶ ಹೆಚ್ಚಾಗಲಿದೆ. ಹೀಗಾಗಿ ನಾಲ್ಕನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಅದರಲ್ಲೂ ಸ್ಪಿನ್ ಸ್ನೇಹಿ ಓವಲ್ ಪಿಚ್ನಲ್ಲಿ ಮಿಂಚಿರುವ ಆರ್. ಅಶ್ವಿನ್ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತ ಎಂದೇ ಹೇಳಬಹುದು.