
ಅಫ್ಘಾನಿಸ್ತಾನ ವಿರುದ್ಧದ ನಿರ್ಣಾಯಕ ವಿಶ್ವಕಪ್ ಪಂದ್ಯಕ್ಕೂ ಮುನ್ನ ಶ್ರೀಲಂಕಾ ತಮಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ವೇಗದ ಬೌಲರ್ ಲಹಿರು ಕುಮಾರ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ.

ಶ್ರೀಲಂಕಾ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದ ಲಹಿರು ಕುಮಾರ, ಅಭ್ಯಾಸದ ಸಮಯದಲ್ಲಿ ಎಡತೊಡೆಯ ಸ್ನಾಯುವಿನ ಗಾಯಕ್ಕೆ ತುತ್ತಾಗಿದ್ದಾರೆ ಹೀಗಾಗಿ ಅವರನ್ನು ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ.

ಇಂಜುರಿಗೆ ತುತ್ತಾಗಿರುವ ಲಹಿರು ಕುಮಾರ ಅವರ ಬದಲು ಮತ್ತೊಬ್ಬ ವೇಗದ ಬೌಲರ್ ದುಷ್ಮಂತ ಚಮೀರಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ICC ತಾಂತ್ರಿಕ ಸಮಿತಿಯು ಅನುಮೋದನೆ ನೀಡಿದೆ.

ಉತ್ತಮ ಫಾರ್ಮ್‌ನಲ್ಲಿದ್ದ ಕುಮಾರ, ಅಕ್ಟೋಬರ್ 26 ರಂದು ಬೆಂಗಳೂರಿನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್ ಪಡೆದಿದ್ದರಯ. ಈಗ ಮುಂಬರುವ ಪಂದ್ಯಗಳಲ್ಲಿ ಶ್ರೀಲಂಕಾ ಖಂಡಿತವಾಗಿಯೂ ಕುಮಾರ ಅವರನ್ನು ಕಳೆದುಕೊಳ್ಳಲಿದೆ.

ಲಂಕಾ ಪ್ರೀಮಿಯರ್ ವೇಳೆ ಇಂಜುರಿಗೊಳಗಾಗಿದ್ದ ಚಮೀರಾ ಆರಂಭದಲ್ಲಿ ಶ್ರೀಲಂಕಾದ ವಿಶ್ವಕಪ್ ತಂಡದ ಭಾಗವಾಗಿರಲಿಲ್ಲ. ಆದರೆ, ನಂತರ ಅವರನ್ನು ಅನುಭವಿ ಏಂಜೆಲೊ ಮ್ಯಾಥ್ಯೂಸ್ ಜೊತೆಗೆ ಮೀಸಲು ತಂಡದಲ್ಲಿ ಇರಿಸಲಾಯಿತು. ಗಾಯಗೊಂಡ ವೇಗದ ಬೌಲರ್ ಮಥೀಶ ಪತಿರಾನ ಬದಲಿಗೆ ಮ್ಯಾಥ್ಯೂಸ್ ಅವರನ್ನು ಇಂಗ್ಲೆಂಡ್ ಪಂದ್ಯದ ಮೊದಲು ಶ್ರೀಲಂಕಾ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.

ಶ್ರೀಲಂಕಾ ವಿಶ್ವಕಪ್ ತಂಡದಲ್ಲಿ ಗಾಯದಿಂದಾಗಿ ಚಾಮಿಕಾ ಕರುಣಾರತ್ನೆ ಮತ್ತು ಏಂಜೆಲೊ ಮ್ಯಾಥ್ಯೂಸ್‌ರನ್ನು ಬದಲಿಸಿದ ನಂತರ ಇದೀಗ ಮೂರನೇ ಬದಲಾವಣೆಯಾಗಿ ಚಮೀರಾ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

ಪ್ರಸ್ತುತ, ಶ್ರೀಲಂಕಾ ಐದು ಪಂದ್ಯಗಳಿಂದ ನಾಲ್ಕು ಅಂಕ ಹಾಗೂ -0.205 ನೆಟ್ ರನ್ರೇಟ್ನೊಂದಿಗೆ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಕೂಡ, ಅದೇ ಸಂಖ್ಯೆಯ ಅಂಕ ಹೊಂದಿದೆಯಾದರೂ, -0.969 ನಿವ್ವಳ ರನ್ ರೇಟ್ ಹೊಂದಿರುವ ಕಾರಣ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.