ಲಕ್ನೋದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ವಿಶ್ವಕಪ್ ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 230 ರನ್ ಕಲೆಹಾಕಿದೆ.
ಟೀಂ ಇಂಡಿಯಾ ಪರ ನಾಯಕನ ಆಟ ಆಡಿದ ರೋಹಿತ್ ಶರ್ಮಾ 101 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 87 ರನ್ ಕಲೆಹಾಕಿ 13 ರನ್ಗಳಿಂದ ಶತಕ ವಂಚಿತರಾದರು.
ಈ ಪಂದ್ಯದಲ್ಲಿ ರೋಹಿತ್ ಶತಕ ವಂಚಿತರಾದರೂ ನಾಯಕನಾಗಿ 100ನೇ ಪಂದ್ಯವನ್ನಾಡಿದ ದಾಖಲೆಯ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18000 ರನ್ಗಳನ್ನು ಸಹ ಪೂರೈಸಿದರು.
ರೋಹಿತ್ ಹೊರತಾಗಿ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ 39 ರನ್ಗಳ ಇನ್ನಿಂಗ್ಸ್ ಆಡಿದರೆ, ಸೂರ್ಯಕುಮಾರ್ ಯಾದವ್ 49 ರನ್ಗಳ ಅವಶ್ಯಕ ಇನ್ನಿಂಗ್ಸ್ ಆಡಿದರು.
ಆದರೆ ತಂಡಕ್ಕೆ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಗಿಲ್, ಶ್ರೇಯಸ್ ಸಿಂಗಲ್ ಡಿಜಿಟ್ಗೆ ವಿಕೆಟ್ ಒಪ್ಪಿಸಿದರೆ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 9 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದರು. ಡೇವಿಡ್ ವಿಲಿ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಮಿಡ್ ಆಫ್‌ನಲ್ಲಿ ಬೆನ್ ಸ್ಟೋಕ್ಸ್‌ಗೆ ಕ್ಯಾಚ್ ನೀಡಿದರು.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದದ್ದು ಇದು 34ನೇ ಬಾರಿ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ಅನಗತ್ಯ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ. ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 34 ಬಾರಿ ಶೂನ್ಯಕ್ಕೆ ಔಟಾಗಿದ್ದರು.
ಇಂಗ್ಲೆಂಡ್ ಪರ ಮಿಂಚಿದ ವೇಗಿಗಳಾದ ಡೇವಿಡ್ ವಿಲ್ಲಿ 3 ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ ಹಾಗೂ ಸ್ಪಿನ್ನರ್ ಆದೀಲ್ ರಶೀದ್ ತಲಾ 2 ವಿಕೆಟ್ ಪಡೆದರು.
Published On - 6:02 pm, Sun, 29 October 23