Updated on: Nov 24, 2022 | 10:53 AM
ಪಾಕಿಸ್ತಾನ ಕ್ರಿಕೆಟ್ ತಂಡದ ಮೇಲೆ ಆಗಾಗ್ಗೆ ಫಿಕ್ಸಿಂಗ್ ಆರೋಪ ಕೇಳಿಬರುವುದು ಹೊಸ ವಿಚಾರವೆನ್ನಲ್ಲ. ಹಲವು ಬಾರಿ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ಹಾಕಿಕೊಂಡಿರುವ ಈ ತಂಡದ ಆಟಗಾರರು ವಿಶ್ವ ಕ್ರಿಕೆಟ್ನ ಮುಂದೆ ಮಂಡಳಿಯ ಮಾನ ಕಳೆದಿದ್ದಾರೆ. ಇದರ ಹೊಸ ಅಧ್ಯಾಯವೆಂಬಂತೆ ಶ್ರೀಲಂಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಫಿಕ್ಸಿಂಗ್ ನಡೆದಿದೆ ಎಂಬ ದೊಡ್ಡ ಆರೋಪ ಕೇಳಿಬಂದಿದೆ.
ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯಲ್ಲಿ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಉಭಯ ದೇಶಗಳ ನಡುವೆ ನಡೆದ ಟೆಸ್ಟ್ ಸರಣಿ 1-1 ರಲ್ಲಿ ಸಮಬಲಗೊಂಡಿತ್ತು. ಈಗ ಈ ಎರಡು ದೇಶಗಳ ನಡುವೆ ನಡೆದ ಈ ಟೆಸ್ಟ್ ಸರಣಿಯಲ್ಲಿ ಫಿಕ್ಸಿಂಗ್ ನಡೆದಿದೆ ಎಂದು ಶ್ರೀಲಂಕಾದ ಪ್ರಮುಖ ನಾಯಕರೊಬ್ಬರು ಅಲ್ಲಿನ ಸಂಸತ್ತಿನಲ್ಲಿ ಆರೋಪಿಸಿದ್ದಾರೆ.
ಈ ಗಂಭೀರ ಆರೋಪದ ನಂತರ, ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಈ ಟೆಸ್ಟ್ ಸರಣಿಯನ್ನು ತನಿಖೆ ಮಾಡುವಂತೆ ಐಸಿಸಿ ಮುಂದೆ ಮನವಿ ಇಟ್ಟಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿದ್ದ ಪಾಕ್ ತಂಡ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ ತಂಡ 4 ವಿಕೆಟ್‌ಗಳಿಂದ ಗೆದ್ದುಕೊಂಡರೆ, ಎರಡನೇ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಶ್ರೀಲಂಕಾ ತಂಡ 246 ರನ್‌ಗಳ ಬೃಹತ್ ಗೆಲುವು ಸಾಧಿಸಿತ್ತು.
ಶ್ರೀಲಂಕಾ ಮಾಡಿರುವ ಈ ಆರೋಪದ ಬಗ್ಗೆ ಪಿಸಿಬಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಷಯದ ಬಗ್ಗೆ ಶ್ರೀಲಂಕಾ ಅಥವಾ ಐಸಿಸಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿಯೇ ನಾವು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಪಿಸಿಬಿ ಅಧಿಕಾರಿ ತಿಳಿಸಿದ್ದಾರೆ.