Suryakumar Yadav: ಕಿಂಗ್ ಕೊಹ್ಲಿಯ ವಿಶ್ವ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್ ಯಾದವ್
Suryakumar Yadav Records: ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಭಾರತ ಟಿ20 ತಂಡದ ಪೂರ್ಣ ಪ್ರಮಾಣದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಪಾದಾರ್ಪಣೆ ಮಾಡಿದ್ದಾರೆ. ವಿಶೇಷ ಎಂದರೆ ಇದೇ ಪಂದ್ಯದ ಮೂಲಕ ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಬರೆದ ವಿಶ್ವ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...
1 / 5
ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಟಿ20 ಕ್ರಿಕೆಟ್ನಲ್ಲಿ ಭರ್ಜರಿ ದಾಖಲೆ ಬರೆದಿದ್ದಾರೆ. ಅದು ಕೂಡ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ (Virat Kohli) ವಿಶ್ವ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ. ದಂಬುಲ್ಲಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೂರ್ಯ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.
2 / 5
ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 58 ರನ್ ಸಿಡಿಸಿದ್ದರು. ಈ ಭರ್ಜರಿ ಬ್ಯಾಟಿಂಗ್ ಫಲವಾಗಿ ಈ ಪಂದ್ಯದ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯು ಸೂರ್ಯಕುಮಾರ್ಗೆ ಒಲಿಯಿತು. ಇದರೊಂದಿಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸೂರ್ಯ ಸರಿಗಟ್ಟಿದರು.
3 / 5
ಅಂದರೆ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವಿಶ್ವ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಟೀಮ್ ಇಂಡಿಯಾ ಪರ 125 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕಿಂಗ್ ಕೊಹ್ಲಿ ಒಟ್ಟು 16 ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿದ್ದರು.
4 / 5
ಇದೀಗ ಕೇವಲ 69 ಪಂದ್ಯಗಳ ಮೂಲಕ ಸೂರ್ಯಕುಮಾರ್ ಯಾದವ್ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಂದರೆ ಭಾರತದ ಪರ 69 ಟಿ20 ಪಂದ್ಯಗಳನ್ನಾಡಿರುವ ಸೂರ್ಯ ಈವರೆಗೆ 16 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಪ್ಲೇಯರ್ ಆಫ್ ದಿ ಮ್ಯಾಚ್ ಅವಾರ್ಡ್ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
5 / 5
ಸದ್ಯ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಕಾರಣ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿ ಮುಂದುವರೆಯುವುದು ಖಚಿತ. ಅದರಲ್ಲೂ ಮುಂಬರುವ ಪಂದ್ಯಗಳಲ್ಲಿ ಒಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಆಟಗಾರ ಎಂಬ ವಿಶ್ವ ದಾಖಲೆ ಸೂರ್ಯಕುಮಾರ್ ಯಾದವ್ ಪಾಲಾಗಲಿದೆ.