
ಕಳೆದ ಭಾನುವಾರ ಡರ್ಬನ್ನ ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಸೌತ್ ಆಫ್ರಿಕಾ-ಭಾರತ ನಡುವಣ ಮೊದಲ ಟಿ20 ಪಂದ್ಯವು ಒಂದೂ ಎಸೆತ ಕಾಣದೆ ಮಳೆಯ ಕಾರಣ ರದ್ದಾಯಿತು. ಹೀಗಾಗಿ ಎರಡನೇ ಟಿ20 ಪಂದ್ಯದ ಮೇಲೆ ಎಲ್ಲರ ಕಣ್ಣಿತ್ತು. ಗೆಬರ್ಹದ ಸ್ಯಾಂಟ್ ಜಾರ್ಜ್ ಪಾರ್ಕ್ನಲ್ಲಿ ಮಂಗಳವಾರ ನಡೆದ ಈ ಪಂದ್ಯ ಕೂಡ ಮಳೆಯ ಜೊತೆಗೆ ಸಾಗಿತು.

ಎರಡನೇ ಟಿ20 ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಫ್ರಿಕಾನ್ನರು 1-0 ಮುನ್ನಡೆ ಪಡೆದುಕೊಂಡಿದ್ದಾರೆ. ಕೊನೆಯ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ದ್ವಿತೀಯ ಟಿ20 ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಆಟಗಾರರನ್ನು ಬಿಟ್ಟುಕೊಡಲಿಲ್ಲ. 2ನೇ ಟಿ20ಯಲ್ಲಿ ಸೋತರೂ ಭಾರತ ಆಡುತ್ತಿರುವ ಕ್ರಿಕೆಟ್ ಬ್ರ್ಯಾಂಡ್ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಭಾರತ ನೀಡುತ್ತಿರುವ ಪ್ರದರ್ಶನ ಖುಷಿ ತಂದಿದೆ. ನಮ್ಮ ಮೆಸೇಜ್ ಸ್ಪಷ್ಟವಾಗಿದೆ. ಇಲ್ಲಿ ಬೌಲ್ ಮಾಡಲು ಸ್ವಲ್ಪ ಕಠಿಣವಾಗಿತ್ತು. ಆದರೆ ನಮ್ಮ ಹುಡುಗರು ನಮ್ಮ ಕಂಫರ್ಟ್ ಝೋನ್‌ನಿಂದ ಹೊರಗಿದ್ದಾರೆ. ಇದು ಸಮಾನ ಸ್ಕೋರ್ ಎಂದು ನಾನು ಭಾವಿಸುತ್ತೇನೆ. ಆದರೆ ಆಫ್ರಿಕಾದವರು ಮೊದಲ 5-6 ಓವರ್‌ಗಳಲ್ಲಿ ಸುಂದರವಾಗಿ ಬ್ಯಾಟ್ ಮಾಡಿದರು ಎಂಬುದು ಸೂರ್ಯಕುಮಾರ್ ಯಾದವ್ ಮಾತು.

ನಮ್ಮ ಟೀಮ್ ಇಂಡಿಯಾ ಕ್ಯಾಂಪ್ ಯಾವಾಗಲೂ ಸಂತೋಷದಿಂದ ಮತ್ತು ಉಲ್ಲಾಸದಿಂದ ತುಂಬಿರುತ್ತದೆ. ಏಕೆಂದರೆ ಮೈದಾನದಲ್ಲಿ ಏನು ನಡೆದರೂ ಅದನ್ನು ಮೈದಾನದಲ್ಲಿಯೇ ಬಿಟ್ಟುಬಿಡಿ ಎಂದು ನಾನು ಹೇಳಿದ್ದೇನೆ. ಇದೀಗ ನಾವು ಮೂರನೇ T20I ಗಾಗಿ ಎದುರು ನೋಡುತ್ತಿದ್ದೇನೆ ಎಂದು ಯಾದವ್ ಹೇಳಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 19.3 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತು. ರಿಂಕು ಸಿಂಗ್ ಅಜೇಯ 68 ಮತ್ತು ಸೂರ್ಉಕುಮಾರ್ 56 ರನ್ ಸಿಡಿಸಿದರು. ಮಳೆಯ ಕಾರಣ ಆಫ್ರಿಕಾಕ್ಕೆ ಗೆಲ್ಲಲು 15 ಓವರ್‌ಗಳಲ್ಲಿ 152 ರನ್ಗಳ ಗುರಿ ನೀಡಲಾಯಿತು. ಆದರೆ, ಹರಿಣಗಳು 13.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 154 ರನ್ ಬಾರಿಸುವ ಮೂಲಕ 5 ವಿಕೆಟ್ಗಳ ಜಯ ಸಾಧಿಸಿದರು.