9ನೇ ಆವೃತ್ತಿಯ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಿಗೂ ಮುನ್ನ ಐಸಿಸಿ ತನ್ನ ನೂತನ ಟಿ20 ಬ್ಯಾಟ್ಸ್ಮನ್ಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಈ ಬಾರಿಯ ಶ್ರೇಯಾಂಕದಲ್ಲಿ ಭಾರಿ ಏರಿಳಿತಗಳಿವೆ. ವಿಶೇಷವೆಂದರೆ ಬಹುಕಾಲ ನಂಬರ್ ಒನ್ ಸ್ಥಾನದಲ್ಲಿದ್ದ ಭಾರತದ ಸೂರ್ಯಕುಮಾರ್ ಯಾದವ್ ಈಗ ಒಂದು ಸ್ಥಾನ ಕೆಳಗಿಳಿದಿದ್ದಾರೆ.
ಇತ್ತ ಸೂರ್ಯಕುಮಾರ್ ಸ್ಥಾನವನ್ನು ಕಸಿದುಕೊಂಡಿರುವ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಟಿ20ಯಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಎನಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸೂರ್ಯಕುಮಾರ್ ಅಲ್ಲದೆ, ಈ ಬಾರಿಯ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ನ ಫಿಲ್ ಸಾಲ್ಟ್, ಪಾಕಿಸ್ತಾನದ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಕೂಡ ಕುಸಿತಕಂಡಿದ್ದಾರೆ.
ನೂತನ ಶ್ರೇಯಾಂಕದಲ್ಲಿ ಬರೋಬ್ಬರಿ 4 ಸ್ಥಾನ ಮೇಲೇರಿರುವ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 844 ರೇಟಿಂಗ್ ಪಾಯಿಂಟ್ಗಳೊಂದಿಗೆ ಸೂರ್ಯಕುಮಾರ್ ಯಾದವ್ರನ್ನು ಹಿಂದಿಕ್ಕಿ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ. ವಾಸ್ತವವಾಗಿ ಟ್ರಾವಿಸ್ ಹೆಡ್ ಇತ್ತೀಚಿನವರೆಗೂ ಟಾಪ್ 10 ರೊಳಗೆ ಇರಲಿಲ್ಲ, ಆದರೆ ಈಗ ಅವರು ಅಗ್ರಸ್ಥಾನಕ್ಕೆ ತಲುಪಿದ್ದಾರೆ.
ಇತ್ತ ಎರಡನೇ ಸ್ಥಾನಕ್ಕೆ ಕುಸಿದಿರುವ ಸೂರ್ಯಕುಮಾರ್ ಯಾದವ್ ಸದ್ಯ 842 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ. ಅಂದರೆ ಮೊದಲ ಸ್ಥಾನದಲ್ಲಿರುವ ಟ್ರಾವಿಸ್ ಹೆಡ್ಗಿಂತ ಸೂರ್ಯಕುಮಾರ್ ಕೇವಲ ಎರಡು ರೇಟಿಂಗ್ ಪಾಯಿಂಟ್‌ಗಳನ್ನು ಕಡಿಮೆ ಹೊಂದಿದ್ದಾರೆ. ಇದರರ್ಥ ಶೀಘ್ರದಲ್ಲೇ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ನಂ.1 ಸ್ಥಾನಕ್ಕೇರುವ ಅವಕಾಶ ಹೊಂದಿದ್ದಾರೆ.
ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಕೂಡ ಒಂದು ಸ್ಥಾನ ಕಸಿದಿದ್ದು, 816 ರೇಟಿಂಗ್‌ನೊಂದಿಗೆ ಅವರಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಆಝಂ ಕೂಡ ಒಂದು ಸ್ಥಾನ ಕುಸಿದಿದ್ದು, 755 ರೇಟಿಂಗ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಮತ್ತೊಬ್ಬ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ ಈಗ 746 ರೇಟಿಂಗ್‌ನೊಂದಿಗೆ ಒಂದು ಸ್ಥಾನ ಕುಸಿದಿದ್ದು, 5 ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ 716 ರೇಟಿಂಗ್‌ನೊಂದಿಗೆ 6ನೇ ಸ್ಥಾನದಲ್ಲಿದ್ದರೆ, ಭಾರತದ ಯಶಸ್ವಿ ಜೈಸ್ವಾಲ್ 672 ರೇಟಿಂಗ್ ಹೊಂದಿದ್ದು ಏಳನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ 659 ರೇಟಿಂಗ್‌ನೊಂದಿಗೆ ಎಂಟನೇ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್‌ನ ಬ್ರೆಂಡನ್ ಕಿಂಗ್ 656 ರೇಟಿಂಗ್‌ನೊಂದಿಗೆ 9 ನೇ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ವೆಸ್ಟ್ ಇಂಡೀಸ್‌ನ ಜಾನ್ಸನ್ ಚಾರ್ಲ್ಸ್ ಏಕಕಾಲದಲ್ಲಿ 4 ಸ್ಥಾನ ಜಿಗಿಯುವಲ್ಲಿ ಯಶಸ್ವಿಯಾಗಿದ್ದು, ಅವರು ಈಗ 655 ರೇಟಿಂಗ್‌ನೊಂದಿಗೆ 10 ನೇ ಸ್ಥಾನ ಪಡೆದುಕೊಂಡಿದ್ದಾರೆ.
ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಏಕಕಾಲದಲ್ಲಿ 5 ಸ್ಥಾನ ಜಿಗಿದು, 648 ರೇಟಿಂಗ್‌ನೊಂದಿಗೆ 11 ನೇ ಸ್ಥಾನವನ್ನು ತಲುಪಿದ್ದಾರೆ.